ಹತ್ತಿದ ಮೆಟ್ಟಿಲ ಮರೆಯಲೇ ಬೇಡ
ಮತ್ತದೆ ಮೆಟ್ಟಿಲು ಇಳಿಯಲು ಬೇಕು
ಕೆಳಗಿನ ಮೆಟ್ಟಿಲು ಎತ್ತಿತು ಎತ್ತರಕೆ
ನಿನ್ನಯ ಒಳಿತನೆ ಬಯಸುತ
ಇಲ್ಲೇ ಇರುವೆನು ಕಾಯುತ ಎಂದೂ!
ಎತ್ತರ ಏರುತ ಏರುತ ಬಳಿಯಲಿ
ಉಳಿಯರು ಹಿತವನು ಬಯಸುವ
ಗೆಳೆಯರು ನೀನಿರುವೆತ್ತರದಲ್ಲಿ
ಉಳಿದರು ಅವರು ಶುಭವನು ಕೋರುತ
ಕೆಳಗಡೆಯೇ, ಮರೆಯಾದರು ನಿನಗೆ
ಒಂಟಿಯ ನೆಂಟನು ನೀನಾದೆ
ಅಂಟಿದ ಗಂಟನು ಕಿತ್ತೆಸೆದೆ
ಕಂಟಕ ಬಂದರು ನೆಂಟರು ಇಲ್ಲ
ಎತ್ತರ ಜೀವನ ಉತ್ತರವೀಯದು
ಹತ್ತಿರ ಬರುವ ಪೀಡೆಯ ಬಿಡಿಸಲು
ಮತ್ತದೆ ಪಯಣ ಗತ್ತಲಿ ಮೆಟ್ಟಿದ
ಹತ್ತಿದ ಮೆಟ್ಟಿಲು ಮತ್ತದು ಬೇಕಾಯ್ತು
ಉತ್ತರವಿದಕೆ ತಿಳಿಯಲಿ ನಿನಗೆ
ಹತ್ತಿರವಿರಲು ಗೊತ್ತಿನ ಜನರು
ಬತ್ತದು ಬತ್ತಿ ನಿನಗದು ಶಕ್ತಿ.
ಅಣ್ಣಾಪುರ್ ಶಿವಕುಮಾರ್, ಲಿಬರ್ಟಿವಿಲ್
ashivakumar@yahoo.com