ಗೆರೆಗಳ ಆಚೀಚೆ….!?

ದಡದಿಂದ ದಡಕೆ
ಬದುಕಿನ ದೋಣಿ ತಲುಪಲು
ನೂರೆಂಟು ಏರಿಳಿತದ ಅಬ್ಬರ!
ಗೆರೆ ದಾಟಿ ಗುರಿ ಮುಟ್ಟಲು
ಸಾಲು ಸಾಲು  ಸವಾಲುಗಳುಬ್ಬರ ?
ಎಡರು-ತೊಡರುಗಳ ಕಣಿವೆ ಕಂದರದಿ
ಧುಮ್ಮಿಕ್ಕುವ ಬೆವರ ಧಾರೆ,
ಧರ್ಮಾಧರ್ಮದ ಸಂಘರ್ಷದ ಕಿಡಿ ತಾಗಿ
ಕೆಂಪಾಗಿಹುದು ಜಲಧಾರೆ….!
`ಲಕ್ಷ್ಮಣ ಗೆರೆ’ ದಾಟಿದ್ದಕ್ಕೆ ಸೀತೆ;
ರಾಮಾಯಣ….
ದ್ರೌಪದಿಯ `ಶೀಲದ ಗೆರೆ’ ಮುಟ್ಟಿದ್ದಕ್ಕೆ;
ಮಹಾಭಾರತ…
ಎರಡರದ್ದೂ ಅಸಂಭವದ ಸಂಭವ…!?
ಮರೆತಿಲ್ಲವಾದರೂ ಜನ…
ಮರೆತಂತೆ ನಟಿಸಿ ಕಾಲದ ಗೆರೆಯನು
ಅಳಿಸಲೆತ್ನಿಸುತಿಹರು ಅಧರ್ಮದಿ;
ತಾವೇ ತುಳಿದು, ಅಳಿದು
ಕಳೆದುಕೊಳ್ಳುತ ಎಲ್ಲವನು !?
ಬದುಕಿನ ಕುಂಟೋ ಬಿಲ್ಲೆ ಆಟದಿ
ಗೆರೆಯೊಳಗೇ ಬಿದ್ದರೆ ಅಲುಪಿ;
ತಲುಪುವ ಗುರಿ- ಅನುಮಾನ,
ಹೊರಗೆ ಬಿದ್ದರೆ- ಅವಮಾನ…
ಕಾಲು ಸೋತು ಕೆಳಗೂರಲು
ಕಾಲನೆದುರು ಅಪಮಾನ…!?
ಕಾಲನೆಲ್ಲಾ ಆಟಗಳೂ ಅಷ್ಟೇ…..
ಗೆರೆಯೊಳಗೇ ತೋರುವುವು ಗುರಿ,
ಎಲ್ಲೆ ಮೀರಿದರೆ ಚಾಟಿ ಇಲ್ಲದೇ
ಆಡಿಸುವವು ಬುಗುರಿ…!?


ಮಹಾಂತೇಶ್.ಬಿ.ನಿಟ್ಟೂರು,
ದಾವಣಗೆರೆ.
[email protected]

 

error: Content is protected !!