ಪ್ರಳಯ ಪ್ರವಾಹ

ಯಾವುದೀ ಪ್ರವಾಹವೋ?
ಪ್ರಳಯದ  ಪ್ರಹಾರವೋ?
ಯಾರ ಮೇಲಿನ  ಕೋಪವೋ?
ಯಾರಿಗೆ ಈ ಶಾಪವೋ?
ಹಿಂದೆ ಅಗ್ನಿದೇವನು
ಉಗ್ರ ರೂಪದಿ ಬಂದನು
ತನ್ನ ಕೆನ್ನಾಲಿಗೆಯ ಚಾಚಿ
ಜೀವಭಕ್ಷಕನಾದನು
ಅವನಿಗೆ ಪ್ರತಿಸ್ಪರ್ಧಿಯಾಗಿ
ಇಂದು ನೀ ಧರೆಗಿಳಿದೆಯಾ?
ವರುಣದೇವನೆ ನಿನ್ನ ಒಡಲಲಿ
ಸೆಳೆದುಕೊಂಡೆಯ ಜೀವಿಯಾ?
ಸಾವುನೋವನು ಕಂಡು ನಿನಗೆ
ಕರುಣೆ ಬಾರದೆ ದೇವನೇ
ಇನ್ನಾದರು ದಯವ ತೋರಿ
ಶಾಂತನಾಗು ವರುಣನೇ.
ಜೀವತೆತ್ತವರೆಷ್ಟೋ ಮಂದಿ
ಸೂರು ಇರದವರೆಷ್ಟೋ ಮಂದಿ
ಪ್ರಕೃತಿ ಮಾತೆಯ ಮುನಿಸಿಗೆ
ತತ್ತರಿಸಿ ಹೋದವರೆಷ್ಟು ಮಂದಿ
ಉಳಿದ ಜನರನು ದಡಕೆ ತಂದರು
ರಕ್ಷಣಾ ಸಿಬ್ಬಂದಿ
ಬದುಕಿದವರ ಸುದೈವವೋ
ಸತ್ತವರ ದುರ್ದೈವವೋ
ಬಂಧು ಬಳಗವ ಕಳೆದುಕೊಂಡಿಹ
ಜನರ ಮೊರೆಯು ಕೇಳದೇ
ಅವರ ದುಃಖವ ನೀಗಿಸಲು
ಭಗವಂತನೇ ಬರಬಾರದೇ.
ಹೋದ ಜೀವವು ಮತ್ತೆ ಬಾರದು
ಅದಕೆ ಬೆಲೆಯನು  ಕಟ್ಟಲಾಗದು
ಉಳಿದವರು ಜೀವನವ ನಡೆಸಲು
ಅಭಯ ಹಸ್ತವ ನೀಡುವಾ
ಎಲ್ಲರೂ ಒಗ್ಗಟ್ಟಿನಿಂದಲಿ
ಜನರ ಸೇವೆ ಮಾಡುವಾ
ಬಿದ್ದವರನು ಎದ್ದು ನಿಲ್ಲಿಸಿ
ಮತ್ತೆ ಬದುಕನು ಕಟ್ಟುವಾ
ನೋವ ಮರೆತು ನಲಿವಿನಿಂದಲಿ
ಬಾಳಲು ನೆರವಾಗುವಾ
ಬನ್ನಿ ಬನ್ನಿ ಬನ್ನಿ ಎಲ್ಲರು
ಅವರನು ಸಂತೈಸುವಾ


ಜಿ.ಎಸ್.ಗಾಯತ್ರಿ, ಶಿಕ್ಷಕಿ
ಬಾಪೂಜಿ ಶಾಲೆ, ಹರಿಹರ
83108 77083

error: Content is protected !!