ಬೆಳಕಲ್ಲಿದ್ದೂ ಕತ್ತಲಾಗಬೇಡ…

ಬಿಡು ಮನುಜ
ಮತ್ತೇನೂ ಹೇಳಲಾರೆ
ಹೇಳಿದಷ್ಟೂ ಹಠ ಹೂಡುವ
ನಿನಗೂ ಅವಳಿಗೂ
ಹೇಳಲು ಹೋಗಿ
ನಾನು ವಿವೇಕ
ನಾನೇ ನೊಂದು ಸಾಕಾಗಿ
ಅಭಿಮಾನ ಭಂಗದಲಿ
ಬೆಂದು ಕಂಡಿರುವೆ ನರಕ
ಬಣ್ಣಕ್ಕೆ ಮತ್ತು ಮತ್ತೂ
ಜೋತು ಬೀಳುವ ನಿನಗೆ
ಗುಣದ ಬಗೆಯತ್ತ
ಸತ್ಕಾರ್ಯದ ಜೀವದತ್ತ
ಅದರ ತುಂಬಿದ ನೋವತ್ತ
ನಿನ್ನ ಚಿತ್ತ ಬರದಿರುವುದೇ
ಬಹು ವಿಚಿತ್ರ ವಿಷಾದವು!
ಏನೂ ಸವೆಯದ ಹಾಲಾಹಲವದು
ನಾರುವ ವಿಷಯವದು!
ಆದರೂ ನೀನತ್ತಲೇ ಜಾರುತ್ತಿರುವೆ!!
ಮತ್ತೆ ಮತ್ತೆ ಅದರತ್ತಲೇ ಸಾಗಿ
ವ್ಯರ್ಥವಾಗುತಿದೆ ನಿನ್ನ ಹೊತ್ತು
ಅಷ್ಟೇ ಏಕೆ ನಿನ್ನ ತಿದ್ದಲು ಹೋಗಿ
ನನ್ನ ಹೊತ್ತೂ ಬೇಗ ಸರಿಯುತಿದೆ!
ಒಂದಿಷ್ಟು ಮನತೆರೆದು ನೋಡು!?
ಬೆಳಕೆಂದು ಬಂದ ಜೀವಕ್ಕೆ
ಜೀವಂತ ಸಮಾಧಿ ಕಟ್ಟುತ್ತಿಹ
ನಿನ್ನ ಅವಿವೇಕಕ್ಕೆ
ಎಷ್ಟಂತ ಹೇಳಲಿ!
ಒಂದು ಕತ್ತಲಲ್ಲಿ ನಿಂತ ನೀ
ಬೆಳಕನ್ನು ಬಿಟ್ಟು ಬಿಡು:
ಇಲ್ಲ ಬೆಳಕಿಗೆ ಬಂದು
ಕತ್ತಲನ್ನು  ಮರೆತುಬಿಡು
ಮನುಷ್ಯನಾಗುವೆ!
“ಬೆಳಕಲ್ಲಿದ್ದೂ ಕತ್ತಲಾಗಬೇಡ”
ಬೆಳಕಿಗೆ ಸಮಾಧಿ ಕಟ್ಟಬೇಡ!
ನಿನ್ನ ನಂಬಿದ ಪರಿಸರಕೆ
ವಂಚಿಸಬೇಡ
ಹಸಿರಾಗಿ ಹಸಿರ ಮುಡಿಸು
ಮಾಯೆಯಿಂದ ನಿನ್ನ ಬಿಡಿಸು
ನಾನಾದರೂ ನಿನ್ನ ಆದರ್ಶಕ್ಕೆ
ಶರಣಾದ ಮಾನವತೆಯ
ಪರಿಶುದ್ಧ ಜೀವವು
ತುಳಿಯುತ್ತಿರುವೆ  ನೀನು
ಸಹಿಸಿ ಕಾಯುತ್ತಿರುವೆ ನಾನು
ತಿರುಗಿ ನೋಡುತ್ತೀಯೆಂದು!
ಯಾಕೆಂದರೆ ನಿನ್ನ ತೊಂಬತ್ತು
ಗುಣವು ಮಣ್ಣಾಗದಿರಲೆಂದು
ಮಮತೆಯಿಂದ ನಿನಗಾಗಿ
ಮಿಡಿದು ತಾಯಿಯಂತೆ ನಿಂತಿದ್ದೇನೆ.
ಆದರೆ…
ನಿನ್ನ ವಿಳಾಸದಲ್ಲಿ ನಾನಿಲ್ಲ!
ಕಾಮನೆಯ ಬೆನ್ನು ಹತ್ತಿರುವೆ
ನೀನು ನಿಲ್ಲದೇ ನಿನಗೆ ಜಯವಿಲ್ಲ
ನಿನ್ನ ನೀ ಗೆಲ್ಲದೆ ನಿನಗೆ ಫಲವಿಲ್ಲ!
ನಿನಗಾಗಿ ನಿನ್ನ ಸತಿಯು
ಪತಿವ್ರತೆಯಾಗಿಯೇ
ಬದುಕಿದ್ದಾಳೆ !
ನೀನಾಗಲಾರೆಯಾ ಮತ್ತೆ
ನಿನ್ನ ಸತಿಗೆ ನೀ ಸತಿವ್ರತನು!?
ಸತ್ವ ಬಾಳಿದೆ ನಿನಗೆ
ಸತ್ಯದಾ ದಿವ್ಯ ಬದುಕಿದೆ
ಅರಿಯೋ ಮನುಜ
ಬಿಡು ನೀನು ಹಿಡಿದ ಕಾಮಿನಿಯ!


ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿ
ಶಿಕ್ಷಕಿ, ಸಾಹಿತಿ
ಸರ್ಕಾರಿ ಪ್ರೌಢಶಾಲೆ, ಹೂವಿನಮಡು . ದಾವಣಗೆರೆ.
[email protected]

error: Content is protected !!