ವೇದವ್ಯಾಸ ಗುರು ಸ್ಮರಣೆ

ಗುರು, ಮಹಾಗುರು, ಸದ್ಗುರು, ಜಗದ್ಗುರು
ಮನುಕುಲಕೇ ಬೆಳಕಿತ್ತ ಮಹಾಮಹಿಮರು
ವೇದಗಳ ವಿಭಜಿಸಿ ಭಜಿಸಿದ ಜ್ಞಾನ ಸಿಂಧು
ಅರಿವನೊಲುಮೆಯ ಮೇರು, ಕಾರುಣ್ಯ ಬಂಧು
ಆದಿ ಗುರು, ಅನಾದಿ ಬೇರು; ವ್ಯಾಸರಿಗೆ-ನಮನ.

ವಿಸ್ತೃತ ವಿಕಾಸದ ಮೆಟ್ಟಿಲುಗಳೊಂದಿಗೆ
ಜ್ಞಾನಾನುಸಂಧಾನ, ಬ್ರಹ್ಮಸೂತ್ರಕೆ ದೀಕ್ಷೆಯಿತ್ತು
ಪುರಾಣೇತಿಹಾಸದ ಕಾವ್ಯಾಮೃತದ ತುತ್ತನಿತ್ತು
ರಸವತ್ತಾಗಿ, ರುಚಿಕಟ್ಟಾಗಿ ಉಣಿಸಿದ ಸಾಕಾರಮೂರ್ತಿ
ವೇದ ವ್ಯಾಸರಿಗೆ-  ನನ್ನ ನಮನ.

ರಾಶಿರಾಶಿ ಜ್ಞಾನಾನುಭವವ ಮುಗಿಲೆತ್ತರ
ನಿಲ್ಲಿಸಿ ಗೆಲ್ಲಿಸಿದ ಪ್ರತಿಭಾ ಶಿರೋಮಣಿ
ಸಾಗರದಾಳದ ತಿಳಿವಿನ ತಿಳಿಯನು
ಕಥಾ ಹಂದರದಿ ವಿಶದಗೊಳಿಸಿ ಉದಾಹರಿಸಿದ
ಪರಮ ಗುರು ವೇದವ್ಯಾಸರಿಗೆ- ನನ್ನ ನಮನ.

ಕರುಣಾಮೂರ್ತಿ, ಮಾತೃ-ಪ್ರೇಮ ಸ್ವರೂಪಿ
ವಿಷ್ಣುರೂಪಿ, ಅರಿವಿನ ಯಜ್ಞದ ರೂವಾರಿ
ಹದಿನೆಂಟು ಮಹಾಪುರಾಣ, ಉಪ ಪುರಾಣ,
ಸರ್ವರೂ ಒಪ್ಪುವ “ಮಹಾಭಾರತ” ದ ಕರ್ತೃ
ಆರ್ಯಾವರ್ತದಾರ್ಯ; ಗುರು ವ್ಯಾಸರಿಗೆ-ನನ್ನ ನಮನ.

ಪಂಡಿತ ಪಾಮರರಾದಿ ಮನುಜರೆಲ್ಲರ
ಬುದ್ದಿ-ಭಾವಕೆ ಶುದ್ಧಿ,ಸಿದ್ದಿಯ ಸೋಕಿಸಿ
ದುರ್ಬುದ್ದಿಗಳ ನಿವಾಳಿಸಿ, ಶೋಕ ನಿವಾರಿಸಿದ,
ಸನಾತನಕೆ ವಿನೂತನದುಡಿಗೆ ತೊಡಿಸಿದ ಮಾನವತಾವಾದಿ ವ್ಯಾಸರಿಗೆ-ನನ್ನ ನಮನ.

ಆಷಾಢ ಮಾಸದ ಹುಣ್ಣಿಮೆಯಲವತರಿಸಿ
ಆಷಾಢಭೂತಿಗಳ ಅಂಧಾಕ್ಷಿಯ ಪೊರೆ ಸರಿಸಿ
ಭಗವದ್ಗೀತೆಯ ಸಾರವ ಸಮನ್ವಯಗೊಳಿಸಿ
ಜ್ಞಾನಾಭಿದಾನದಿ ‘ಗುರೂಣಾಂ ಗುರುವೇ’ ಆದ
ಕೃಷ್ಣದ್ವೈಪಾಯನ ‘ವ್ಯಾಸ’ ಮಹರ್ಷಿಗೆ-ನನ್ನ ನಮನ.


ಮಹಾಂತೇಶ್ ಬಿ. ನಿಟ್ಟೂರ್
ದಾವಣಗೆರೆ.
[email protected]

error: Content is protected !!