ಭಾವಗಳ ಬಡಿದೆಬ್ಬಿಸುವ ಕಚಗುಳಿ…

ಮೂಡಣದಿ ಜಗವ ಬೆಳಗುವ
ಸೂರ್ಯ ಮೂಡುವ ಮುನ್ನ
ಮುಂಗೋಳಿ ಘಂಟೆ ಮೊಳಗುವ
ವೇಳೆ ಆರಂಭವಾಗುವ ಮುನ್ನ.

ಬೇಗನೇ ಎದ್ದು ಪತ್ರಿಕೆ ಹಂಚಲು
ಚುಮು ಚಳಿಯಲ್ಲಿ ಹೊರಟೆ ಮೆಲ್ಲಗೆ
ಬಿಸಿ ಬಿಸಿ ಆಹ್ಲಾದ ಚಹಾ ಸೇವಿಸಲು
ಹೊಸೋತ್ಸಾಹ ಮೂಡಿತ್ತು ಮನದೊಳಗೆ.

ಚುಕ್ಕಿಗಳಿಟ್ಟು ಬಣ್ಣ ಬಣ್ಣದ ರಂಗೋಲಿ
ಚಿತ್ತಾರ ಮೂಡಿಸುವ ನಾರಿಯರ ನೋಟ
ಮೈಮನ ಪುಳಕಿತಗೊಳಿಸುವ ಕಂಗಳಲಿ
ಕೊಲ್ಲುವ ವಾರೆ ನೋಟದ ರಸದೂಟ.

ಮನೆಮನೆಗೆ ಪತ್ರಿಕೆ ಹಾಕುವ ಖುಷಿಯು
ಮನಗಳ ಓದಿನೆಡೆಗೆ ಕರೆಯೋ ಕೃಷಿಯು
ನವತನಗಳ ನೀಡುವ ಮುದದ ಚಳಿಯು
ಭಾವಗಳ ಬಡಿದೆಬ್ಬಿಸುವ ಕಚಗುಳಿಯು.

ಚಳಿಯಲ್ಲಿಯೂ ಬಾಳ ಕಾಯಕ ಬಿಡದೆ
ನಿತ್ಯವು ಪತ್ರಿಕೆಗಳ ಹಂಚುತ ನಡೆದೆ
ಸ್ವಾವಲಂಬನೆಯ ಸ್ವಾಭಿಮಾನ ನನ್ನೊಳು
ತುಂಬಿರಲು‌ ಚಳಿ ಮಳೆ ಲೆಕ್ಕವೇ ಹೇಳು.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
9740050150
[email protected]

error: Content is protected !!