ಏ ಮನುಜ ನೀ ಈಗ ಬದಲಾಗು…

ಏಮನುಜ ನೀ ಈಗ ಬದಲಾಗು, ಮುಖವಾಡ ಕಳಚು
ಕೊರೊನಾ ಎಂಬ ಮಹಾಮಾರಿ ಇದು ಯಾವ ಜಾತಿಯೋ
ಧರ್ಮವೋ, ಲಿಂಗವೋ ಯಾವ ದೇಶದ್ದೋ
ಆದರೆ ಮನುಷ್ಯನ ಅಹಂ, ಸ್ವಾರ್ಥ, ಕ್ರೋಧ, ದ್ವೇಷ, ಕ್ರೂರತೆಗೆ
ಕೋವಿಡ್‌-19 ಒಂದು ಒಳ್ಳೆ ಸಂದೇಶವನ್ನು ಕೊಟ್ಟಿರುವುದಂತೂ ನಿಜ
ಅದೇನೆಂದರೆ, ಏ ಮನುಜ ನೀ ತೃಣಕ್ಕೆ ಸಮ.

ಉಸಿರಿರುವ ತನಕ ನಾನು ನನ್ನದು
ಉಸಿರೇ ನಿಂತ ಮೇಲೆ ಏನಿದೆ ನಿನ್ನದು
ಏ ಮನುಜ ನೀನೀಗ ಬದಲಾಗು.

ಬರೀ ಧರ್ಮ, ಜಾತಿ, ಮತ ಎಂಬ ಭ್ರಮೆಯಲ್ಲಿ ನೀನಿದ್ದು,
ರಾಜಕೀಯ ಕುತಂತ್ರಗಳಿಂದಲೇ ಈ ನಿನ್ನ ಇಡೀ ಜೀವನ ನಡೆಸಿ
ಸ್ನೇಹ, ಸಂಬಂಧ, ಮನುಷ್ಯತ್ವವನ್ನೇ ಮರೆತು ನೀ ಸಾಧಿಸುವುದಾದರೂ ಏನು?

ಬಿಸಿಲಿನ ಕುದುರೆಯನ್ನೇರಿ, ಏನೋ ಸಾಧಿಸಿ ಬಿಡುತ್ತೇನೆಂಬ
ಭ್ರಮೆಯಿಂದ ನೂರಾರು ವರ್ಷ ಈ ಭೂಮಿ ಮೇಲಿರುತ್ತೇವೆ ಎಂದು
ಬೀಗುತ್ತಿದ್ದಂತವರಿಗೆ ಈ ಲಾಕ್‌ಡೌನ್ ವಾಸ್ತವ ಜೀವನ ತೋರಿಸಿದೆ.

ಕೊರೊನಾ ಎಂಬ ಮಹಾಮಾರಿ ದೇವರೋ? ದೆವ್ವವೋ?
ಒಂದು ಕಡೆ ಮಸಣ ತೋರಿಸಿದೆ
ಇನ್ನೊಂದು ಕಡೆ ನಮ್ಮವರ ಸಂಬಂಧವನ್ನು ಗಟ್ಟಿ ಮಾಡಿದೆ.

ಕೊರೊನಾ ಯೋಧರಿಗೆ ನಿಮಗಿದೋ ನಮನ
ಹೆಚ್ಚುತ್ತಿದೆ ನಿಮ್ಮ ಸೇವೆ ಕಂಡು ಅಭಿಮಾನ
ನಿತ್ಯ ಶ್ರಮಿಸುತ್ತಿರಿ ಓಡಿಸಲು ಕೊರೊನಾ, ನಿಸ್ವಾರ್ಥ ಸೇವೆಗೆ ಋಣಿ ನಮ್ಮ ಜನ…

ಪ್ರಕೃತಿ ಎಂಬ ಮಹಾಶಕ್ತಿಗೆ ಸೆಡ್ಡೊಡೆದು ಬದುಕುವುದುಂಟೇ?
ಅದಕ್ಕೆ ಕೊರೊನಾ ಎಂಬುದು ನಿಧಾನವಾಗಿ ನಮಗೆಲ್ಲಾ ಪಾಠ ಕಲಿಸಿದೆ
ಮನೆಯಲ್ಲೇ ಕೂರಿಸಿ ಪಾಠ ಕಲಿಸಿದ ಬೆಸ್ಟ್ ಟೀಚರ್ ಅಂದ್ರೆ ಕೊರೊನಾ…

ಮನುಷ್ಯ ಇಲ್ಲಿ ಅನಿವಾರ್ಯವಲ್ಲ, ಆದರೆ ಪ್ರಕೃತಿ ನಮಗೆ ಅನಿವಾರ್ಯ
ಪ್ರಕೃತಿ ಮತ್ತು ಸ್ತ್ರೀ ಕುಲಕ್ಕೆ ನಾವು ಎಷ್ಟು ಹಿಂಸಿಸುತ್ತೇವೋ
ಅಷ್ಟೇ ನೋವು ನಮಗೆ ಕಟ್ಟಿಟ್ಟ ಬುತ್ತಿ.

ಸಮಯ ಯಾರನ್ನೂ ಕಾಯುವುದಿಲ್ಲ. ಎಲ್ಲರೂ ಅದರೊಂದಿಗೆ ಸಾಗಬೇಕಷ್ಟೇ
ಕಾಲಚಕ್ರ ಯಾರಪ್ಪನ ಆಸ್ತಿಯೂ ಅಲ್ಲ, ಎಲ್ಲರೂ ಅದಕ್ಕೆ ಬಾಗಲೇ ಬೇಕು.


ನೀಮಾ ಡಿ.ಆರ್.
ಇಂಗ್ಲಿಷ್ ಉಪನ್ಯಾಸಕರು,
ದಾವಣಗೆರೆ.
[email protected]

error: Content is protected !!