ಸಂಪ್ರದಾಯಸ್ಥರ ಮನೆಯ ಮೂಲೆ ಸಂದಿನ ಕತ್ತಲೆಯಲ್ಲಿ
ಹೆಣ್ಣು ಮಕ್ಕಳು ಪಡುವ ಪಾಡು ತಿಂಗಳ ರಜೆಯಲ್ಲಿ
ಅನುಭವಿಸುವ ಸ್ಥಿತಿಯ ಅರಿವು
ಕ್ವಾರಂಟೈನ್ ಗಂಡಸರುಗಳಿಗೀಗಾದವು.
ವಾಹನಗಳ ಟೈರುಗಳಿಂದ ತರಚಿಸಿಕೊಂಡ
ಹೆದ್ದಾರಿ ರಸ್ತೆಗಳೀಗ ಬಿಸಿಲ ಕೆಂಡ
ವಲಸೆ ಕಾರ್ಮಿಕರ ಅಮಾಯಕ ಪಾದಗಳ
ಕೋಟಿ ಹೆಜ್ಜೆಗಳ ಮುದ್ರೆಗೆ ಅಳುತ್ತಿವೆ ಗಳಗಳ.
ಹೆತ್ತ ಮಗುವಿಗೂ ಮುತ್ತಿಕ್ಕಿ ಮುದ್ದಾಡದಂತೆ
ಮುಖಗವುಸಿನ ಗೋಡೆ ತಾಯಿ ಬಾಯಿಗಂತೆ
ಒಳಬನ್ನಿರೆಂದು ಬಾಯ್ತುಂಬಾ ಕರೆಯುವುದಿರಲಿ
ಬಂಧುಗಳನ್ನೂ ನಿಂತೇ ಮಾತಾಡಿಸುವಂತಾಯ್ತು ದೂರದಲಿ.
ಮದ್ಯ ಸಾರಗಳ ಕೈಯಲ್ಲೂ ಮುಟ್ಟೆನೆಂದವರ
ಭೀಷ್ಮ ಶಪಥದ ಕೈಗಳಿಗೀಗ ಪದೇ ಪದೇ ಸ್ಯಾನಿಟೈಸರ್ !
`ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು’
ಇದ ತಿಳಿದೂ ಕಿಟ್‌ಗಳ ಬೇಡಿ ಬಿಚ್ಚಿ ಬೇಯಿಸಿ ತಿಂಬುದು !
ಷೆರ್ಲಾಕ್ ಹೋಮ್ಸ್‌ನ ಪತ್ತೆದಾರಿಕೆಯೀಗ ನೀರಸ
ಸೋಂಕಿತರ ಟ್ರಾವೆಲ್ ಹಿಸ್ಟರಿ ಕೆದಕುವುದೇ ಸಾಹಸ,
ಪಾತಾಳದಾಚೆಗೆ ಇಳಿದಿದೆ ಜಾಗತಿಕ, ಆರ್ಥಿಕ ಸ್ಥಿತಿಯೀಗ
ಮೇಲೆದ್ದು ಬಂದೀತೇ ಆದಷ್ಟು ಬೇಗ.
ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ, ದಾವಣಗೆರೆ.