ನಾ ಪಡೆದ ದೇಹವಿದು
ಈ ಜನ್ಮಕಿದು ವಿಧಿಯಿತ್ತ ಗೂಡು
ಇಷ್ಟವೋ ಅನಿಷ್ಟವೋ ಬಿಡು
ಗೂಡಿದನು ಗುಡಿಯ ಮಾಡು.
ಇದರಲಡಗಿರುವ ಆತ್ಮವದು
ಕೋಟಿ ಗೂಡುಗಳಲಿ ಇದ್ದು ಬಂದು
ಮುಕ್ತಿ ಪಡೆಯುವ ಗುರಿಯನೊಂದು
ಹೊತ್ತು ತಂದು ಕಳೆಯುತಿದೆ ಹೊತ್ತನಿಂದು.
ಗೂಡನಿಂದು ಗುಡಿಯ ಮಾಡದಿರೆ
ಸಿಕ್ಕುವುದು ಮತ್ತೊಂದು ಗೂಡು
ಸಂಸಾರ ಜಂಜಾಟ ವ್ಯರ್ಥ ವ್ಯಾಮೋಹ
ಚಕ್ರತಿರುಗುವುದು ಆತ್ಮವನು ಹೊತ್ತು.
ತಿಳಿದಿಹೆನು ತಂದೆ ಎನ್ನಾತ್ಮಕೆ
ಮುಕ್ತಿ ದೊರೆತು ಮೇಲಣ
ತವರ್ಮನೆಯ ತಲುಪುವ ತನಕ
ಬಾಡಿಗೆ ಮನೆಗಳ ಸರದಾರ ನಾನೆಂದು.!
ಅಣ್ಣಾಪುರ್ ಶಿವಕುಮಾರ್, ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
[email protected]