ದಾಹಕೋ, ಮೋಹಕೋ
ಹಸಿವಿಗೋ, ಕಸುವಿಗೋ;
ದುರಾಸೆಯುರಗ ತನ್ನ ಬಾಲವನ್ನು
ತಾನೇ ತಿಂದು ಸ್ವಾಹ…ಸ್ವಾಹ….!
ನಿಧಿಯಾಸೆಗೆ ಕರುಳ ಬಳ್ಳಿಯ
ಬಲಿ ಕೊಟ್ಟಂತೆ……?
ಮುಗಿಲೆತ್ತರದ ಮಹಲಿನಡಿ
ಕೂಲಿಗಳ ಹೆಣದ ಅಡಿಪಾಯ,
ನೆತ್ತರದ ನೆರಳಡಿ ಉಳಿದವರ
ಊಳಿಗದವರ ಉಸಿರಿಗೂ ಅಪಾಯ….
ನಮ್ಮೂರ ಗಡಿ ಸಾಲು, ಕೆರೆ-ಕುಂಟೆ,
ಗೋಮಾಳದ ಬಯಲಿಗೆ
ಉತ್ತರದ ತಕ್ಕಡಿಯ ತುಕಡಿಗಳ ಸಾಲು,
ಯಾಮಾರಿದರೆ ಭವಿಷ್ಯದ ಕೈಗೆ
ದಾಸ್ಯದ ಕಿಲುಬು ಹಿಡಿದ ಕೀಲು…..!?
ದುರಹಂಕಾರದಮಲಿನ
ಕತ್ತಲೆ ಬೆಳಕನ್ನೇ ನುಂಗಿ
ಬೆತ್ತಲೆಗೆ ಬೇಷರತ್ ಬೆಲೆ ಕಟ್ಟಿ;
ಹರಾಜು ರಾಜಾರೋಷ ತುಟ್ಟಿ!
ಕೆಂಪು ದೀಪವೂ ನಾಚಿ
ಕುಳಿತಿದೆ ಕೈ ಕಟ್ಟಿ….
ತೆರೆ-ಮರೆಯ ಮಾಯದ ಮೋಸದ
ಕೆಂಪು ಬಿಂದು ಮಹಾಸಿಂಧುವನೇ
ನುಂಗಲೆತ್ನಿಸಿದೆ ನೆಕ್ಕುತ ಮುಕ್ಕುತ….!
ಸಲುಗೆಯ ನೆಪದಿ ಬೇಲಿ ಬದಿಯ
ನಯ ವಂಚಕ ಹಾವು
ಕರಿ ಮೋಡದ ಮಿಂಚಿನಂಚಲಿ
ಸಂಚಿನ ಹಗ್ಗ ಹೊಸೆಯುತಿಹುದು,
ಹಿಂದೆ ಸರಿಯದೆ ಹೆಡೆಮುರಿ
ಕಟ್ಟುವುದೊಂದೇ ಬಾಕಿ ಉಳಿದಿಹುದು…..!?
ಮಹಾಂತೇಶ್ ಬಿ. ನಿಟ್ಟೂರ್
ದಾವಣಗೆರೆ.
[email protected]