ಅಪ್ಪನ ನೆನಪಿನೊಳ್ …

`ಬೆಳಕಿನ ದೀಪಂ’
ಕರದಲಿ ಮೆರೆಯದ ಅಕ್ಷರ
ಕೊರಗದೆ ನಿನ್ನಯ ಮನಸರಿಯಿತು ಕಾಯಕದೊಳ್
ಸೆರೆಹಿಡಿಯಿತು ಬನದ ಹಸಿರ
ಮರಗಿಡ ಆ ಪರಿಸರ ಜೊತೆ ನಿನ್ನೊಡನಾಟಂ.                                                         

ಕಾಡಿನ ಕಟ್ಟಿಗೆ ಸೀಳುತ
ನಾಡಿಗೆ ಹೋರಲು ಹೆಗಲು ಕೊಡುತ ನಡೆದೆ ನಿತ್ಯಂ
ಕಾಡಿಸಿದ ದುಗುಡಗಳ ಬಡಿ                     .
ದಾಡುತ ಬದುಕಿನ ಹಡಗನು ಮುನ್ನಡೆಸಿದೆ ನೀಂ.

ಹೊಲವ ಉಳುತ ಹದ ಮಾಡುತ
ಮಲಗದೆ ಸುಗ್ಗಿಯ ಫಸಲಿಗೆ ಕಾಯುತ ಇರುಳೊಳ್
ಹುಲುಸಾಗಿ ಬೆಳೆದ ತೆನೆಗಳ
ನಲಿಯುತ ಕೂಡಿಸಿ ಗಳಿಸಿದೆ ನೀ ಪ್ರತಿಫಲವಂ.

ಮುಂದೆ ಬರಲು ಜೊತೆಗೂಡಿದ
ಅಂದದ ನಾಯಿ ಹಸು ಮೇಕೆ ಬೆಕ್ಕು ಕುರಿಗಳಂ
ಕಂದನ ಪರಿ ಸಲಹಿದೆ ಎದೆ
ಗುಂದದೆ ಅವುಗಳಿಗೆ ಮೇವ ನೀಡಿ ಪೊರೆದೆ ನೀಂ.

ಬೆಟ್ಟ ಕಣಿವೆ ಖಗ ಮೃಗಗಳ
ನಟ್ಟನಡುವೆ ನೀ ಪಡೆದ ಅನುಭವ ವಿಶೇಷಂ
ದಟ್ಟಡವಿಯಲಿ ಅರಸಿ ನೀ
ಕೊಟ್ಟ ಮರದ ಹಣ್ಣ ರುಚಿಯ ಹೇಳಲಸಾಧ್ಯಂ.

ಶಾಲೆಗೆ ಸೇರಿಸಿ ಮಕ್ಕಳ
ಪಾಲಿಗೆ ಹೊಸ ಕನಸ ಬಿತ್ತಿ ಬೆಳೆಸಿದೆ ವಿನಯಂ
ಕಾಲವನು ಪೋಲು ಮಾಡದ
ಸೋಲಿಗೆ ಅಂಜದ ಧೃತಿಯನು ತುಂಬಿದೆ ಎದೆಯೊಳ್.                                                          

ಸುರಿಸಿದ ಬೆವರಿನ ಹನಿಗಳು
ಮಿರುಗುವ ಹೊನ್ನಿನ ಮಣಿಗಳು ನಿನ್ನಯ ಸತ್ಯಂ
ಸರಳತೆ ಸುಗುಣವು ನನ್ನಯ
ಮರೆಸುವ ಇರುಳಿನ ನಡಿಗೆಗೆ ಬೆಳಕಿನ ದೀಪಂ.


ಥಾಮಸ್ ಎ.
ಶಿಕ್ಷಕರು, ಹರಿಹರ.  9449364585
[email protected]

error: Content is protected !!