ಮಾಗಿದ ಹಣ್ಣು ಎಸ್ಸೆಸ್….

ಅವರಿವರೆನ್ನದೆ
ಎಲ್ಲರೂ ನಮ್ಮವರೇ
ಎನ್ನುವ ‘ಸಮನ್ವಯ ಸಿಂಧು’
ಈಗ ಮಾಗಿದ ಹಣ್ಣು
ರಸಭರಿತ ಪಕ್ಕಾ ಜವಾರಿ ತಳಿ        || 1 ||

ಎಂಬಂತ್ತೊಂಬತ್ತು ಆಯ್ತು ಎಂಬುದು
ಲೆಕ್ಕಕೆ ಸೇರಿದ ಬಾಬ್ತು ಅಷ್ಟೇ …
ಮೆದುಳಿನ ಮೊನಚು
ಈಗಲೂ ಸಾಣೆ ಹಿಡಿದಷ್ಟೇ ಚೂಪು!     ||2||

ಶ್ವೇತಾಂಬರಕೆ ಕನ್ನಡಕದ ಕದಿರು
ದೃಷ್ಟಿನೆಟ್ಟು ನೋಡಿದಾಕ್ಷಣ
‘ಯಾಕೆ ಕಂಡೇಯಿಲ್ಲಾ,
ಊರಲ್ಲಿರಲಿಲ್ಲಾ- ಹುಷಾರಿಲ್ಲಾ’
ಪ್ರಶ್ನೆಗಳ ಸಾಲು … ನೆಪ ಹೇಳಿದಿರೊ
‘ಬುರುಡೆ ಬಿಡಬೇಡ’ವೆಂಬ ನೆನಪಿನ ಸವಾಲು
ಈ ತೊಂಬತ್ತರ ಹರೆಯಕ್ಕೆ …       ||3||

ಕಾರೆಂಬ ತೇರನೇರಿ ಹೊಂಟರೆ
ಬಕ್ಕಪ್ಪನಿಗೆ ಭಕ್ತಿಯ ನಮನ
ದುಗ್ಗಮ್ಮ ದೇವಿಗೆ ಮಂಗಳಾರುತಿ ತಟ್ಟೆಗೆ ಕಾಣಿಕೆ …  ||4||

ಅಂಗಡಿಯ ಆಸನದಲ್ಲಿ ಕುಳಿತು
ಕಣ್ಮಚ್ಚಿ ಸುತ್ತಲ ದೈವಳಿಗೆ ನಮನ..
ಕಣ್ತೆರೆದರಾಯ್ತು ವಹಿವಾಟು
ತಕ್ಕಡಿ ಸೂಜಿಮನೆ
ಹಿಂಭಾರ-ಮುಂಭಾರದ ಮೇಲಷ್ಟೇ ದೃಷ್ಟಿ
ತೇಜಿಮಂದಿಯದೇ ಲೆಕ್ಕಾಚಾರ…|       ||5||

ಅಕ್ಕಮಹಾದೇವಿ ರಸ್ತೆಗೆ
ಅಧ್ಯಾಪಕರು ಪ್ರಾಧ್ಯಾಪಕರು
ಮಂಡಳಿಯ ಸದಸ್ಯಗಣ
ಲೆಕ್ಕಪತ್ರ ಪಂಡಿತರ ಸಾಲು …  ||6||

ಕಂತೆಕಂತೆ ಫೈಲುಗಳು,
ಟಿಕ್ಕು ಹಾಕಿದ ಪುಟಗಳ
ಸೂಕ್ಷ್ಮಾತಿಸೂಕ್ಷ್ಮ ನೋಟ
ಹೆಚ್ಚುಕಮ್ಮಿ ಕಂಡರೆ
‘ತರಾಟೆ’ ಪದಕೆ ಅಲ್ಲೇ ಅರ್ಥ…    ||7||

ಮುಗಿಯಲಿಲ್ಲ ಇಲ್ಲಿಗೆ
ದಾನಧರ್ಮಗಳ ತಪಶೀಲು…
ರಾಜಕಾರಣದ ಮಜಲು
ಕೊಟ್ಟ ಭರವಸೆಗಳ
ವಿಮರ್ಶೆ ಪರಮಾರ್ಶೆ…          ||8||

ಗಂಟೆ ಒಂಬತ್ತೋ ಹತ್ತೋ
ಕಾರೆಂಬ ತೇರನೇರಿ ಮನೆಮಂದಿರಕೆ …
ಬಾಗಿಲೋಳು, ಮನೆ ದೇಗುಲದೊಳು
ಕೈಮುಗಿದು ಕಣ್ಣೊತ್ತಿಕೊಂಡು
ಕುರ್ಚಿಕಡೆ ಸಣ್ಣ ಹೆಜ್ಜೆ ಹಿತೈಷಿಗಳೊಡನೆ ಆಟ
ಹತ್ತೇ ರೂಪಾಯಿಗೆ ಒಂದು ಸುತ್ತು | ||9||

ದಿನಚರಿ ಆರಂಭವೋ,
ಸ್ವಾಮಿ-ಶೆಟ್ಟರಿಗೆ ದೂರವಾಣಿ ಕರೆ …
‘ಹೊರಟರು, ಹೊರಟೇಬಿಟ್ಟರು’
ಹತ್ತೇ ನಿಮಿಷಲ್ಲಿ ಅಲ್ಲಿಗೆ …           ||10||

ತೊಂಬತ್ತಕ್ಕಡಿಯಿಟ್ಟ ಕಾಯಜಂಗಮ
ಸಭೆ ಸಮಾರಂಭಗಳಿಗೆ ಪಯಣ …
ಬೇಡಿಕೆ ಈಡೇರಿಕೆಗಳಿಗೆ
‘ಎಸ್ಸೆಸ್’ ಅನ್ನುವುದೇ ಹೆಚ್ಚು
ಈ ಮಾಗಿದ ಹಣ್ಣು…                    ||11||


 ಬಾ.ಮ.ಬಸವರಾಜಯ್ಯ

 

error: Content is protected !!