ಹಣ್ಣು ತಿಂದು ಕೆಟ್ಟೆ ಕಂದ
ಹಣ್ಣು ತಿಂದು ಕೆಟ್ಟೆ,
ಹಣ್ಣು ಎಂದು ಬಾಯೊಳಿಟ್ಟು
ಮುದದಿ ಜಗಿದು ಬಿಟ್ಟೆ.
ಬಾಯಿಯೊಳಗೆ ದೊಡ್ಡ ಸ್ಪೋಟ!
ಅಗ್ನಿಕೆಂಡ ಕುಂಡ
ಕತ್ತರಿಸಿತು ನಾಲಿಗೆಯನು
ತತ್ತರಿಸಿತು ಜೀವ.
ಕಣ್ಣು ಕತ್ತಲಾವರಿಸಿತು
ತಾಳದಾದೆ, ನೋವ
ತಿನ್ನಲಾರೆ, ಕುಡಿಯಲಾರೆ
ಸಹಿಸದಾದೆ ಕಾವ.
ಹಣ್ಣು ಕೆಟ್ಟದೇನು? ಅಮ್ಮ
ಹಣ್ಣು ಕೆಟ್ಟದೇನು?
ಹಣ್ಣುಕೆಟ್ಟಿದಲ್ಲ ಕಂದ
ಹಣ್ಣು ಕೆಟ್ಟಿದಲ್ಲ,
ಹಣ್ಣಿನೊಳಗೆ ಸ್ಪೋಟವಿಟ್ಟ
ಜನರ ಬುದ್ಧಿಕೆಟ್ಟ.
ಸ್ಪೋಟವಿಟ್ಟ ಜನರನೇಕೆ
ಹಾಗೆ ಬಿಟ್ಟಿ ಅಮ್ಮ?
ಕೆಟ್ಟತನಕೆ ಕೆಟ್ಟ ಕೋಪ
ಸಾಧುವಲ್ಲಲ ಕಂದ,
ಕುಟ್ಟಿ ಅವರ ಕೆಡವಿದರೆ
ಮರಳುವುದೇ ಜೀವ.
ಮಾತನಾಡಲಾರೆ ಕಂದ
ಉರಿಯುತಿದೆ ಬಾಯಿ,
ನೀರೊಳಗೆ ಮುಳುಗಿನಿಂತೆ
ಕುದಿಯುತಿದೆ ಮೈಯಿ.
ಹೋಗುತಿದೆ ಪ್ರಾಣ ಕಂದ
ಉಳಿಸದಾದೆ ನಿನ್ನ
ಇಳಿಸಿ ನಿನಗೆ ತೋರದಾದೆ
ಈ ಜಗದ ಜನರ…
ನೋಡಲಾರೆ ಬೇಡ ಅಮ್ಮ
ಇಂತ ಲೋಕವನ್ನ
ಇದೋ ಇಲ್ಲೆ ಹೊಟ್ಟೆಯೊಳಗೇ
ಬಿಟ್ಟೆ ಪ್ರಾಣವನ್ನ.
ನನ್ನ ಪ್ರಾಣ ನಿನ್ನ ಪ್ರಾಣ
ಒಟ್ಟು ಸೇರಿ ಕಂದ
ಬಿಟ್ಟು ದೇಹ ನೆಟ್ಟಹೋಗಿ
ಮುಟ್ಟಲಿ ಹರಿಯನ್ನ
ಮುಟ್ಟಲಿ ಶಿವನನ್ನ.
ಎಚ್.ಬಿ. ಮಂಜುನಾಥ್
ಹಿರಿಯ ಪತ್ರಕರ್ತ, ದಾವಣಗೆರೆ.
9448873693