ಅಪ್ಪಾ….

ಗೆಳತಿಯರ ಜೊತೆಗೆ
ಶಾಲೆಯಿಂದ ಮನೆಗೆ
ಮರಳುತ್ತಿರುವಾಗ
ದಾರಿಯ ಮಧ್ಯೆ
ನನ್ನಪ್ಪ ಕಂಠಪೂರ್ತಿ
ಮದ್ಯ ಕುಡಿದು
ರಸ್ತೆಗೆ ಬಿದ್ದಿರುವುದನು
ಒಮ್ಮೆಲೇ ಕಂಡಾಗ
ತಡೆಯಲಾಗದೆ
ದುಃಖ ಉಮ್ಮಳಿಸಿತು
ಅಪ್ಪಾ ಎದ್ದೇಳಪ್ಪಾ,
ರಸ್ತೆಯಲ್ಲಿ ಸಾಗುತ್ತಿರುವ
ದಾರಿಹೋಕರೆಲ್ಲಾ
ಕುಡುಕ ಬಿದ್ದಿದ್ದಾನೆಂದು
ಹೀಯಾಳಿಸುತ್ತಿದ್ದಾರೆ!
ಹೊಲ ಮಾರಿದೆ,
ಅವ್ವನ ಒಡವೆ ಮಾರಿದೆ,
ಮನೆಯಲ್ಲಿ ಇದ್ದದ್ದನ್ನೆಲ್ಲಾ ಮಾರಿ
ಹೆಂಡ- ಸಾರಾಯಿ
ಕುಡಿದು ಕಳೆದುಕೊಂಡೆ!
ಹೆಂಡ – ಸಾರಾಯಿ ಸಹವಾಸ
ಹೆಂಡತಿ – ಮಕ್ಕಳು ಉಪವಾಸ
ಎನ್ನೋದು ಗೊತ್ತಿಲ್ಲೇನಪ್ಪಾ!
ಇನ್ನೇನು ಉಳಿದಿದೆಯಪ್ಪಾ…
ಅಕ್ಕ ಪಕ್ಕದ ಮನೆಯವರೆಲ್ಲಾ
ಕುಡುಕನ ಮಗಳೆಂದು
ಪದೇಪದೇ ಕರೆಯುತ್ತಾರೆ
ಅವರಿಗೆಲ್ಲಾ ಏನು ಹೇಳಲಿ ಅಪ್ಪಾ….


ಜಿ.ಎ. ಜಗದೀಶ್
ನಿವೃತ್ತ ಪೊಲೀಸ್ ಅಧೀಕ್ಷಕರು ದಾವಣಗೆರೆ

 

error: Content is protected !!