ಸಾಗರದ ಆವಿಗೆ
ಸಾವಿರದ ಬಾವಿಗಳು
ಮೂಲವಾಗದೇ
ಮೂಲವನೂ ಮರೆಯದೇ
ಕಾಲಾಂಬುಧಿಯಲಿ ಲೀನ…!
ಬೆಟ್ಟದಲಿ ಮನೆ
ಅಟ್ಟದಲಿ ತೆನೆ
ಮನದುಯ್ಯಾಲೆಗೆಲ್ಲಿ ಕೊನೆ?
ಅಕ್ಷರದ ಕ್ಷಾರಕೆ
ಜ್ಞಾನ ಅಜೀರ್ಣ
ಅಜ್ಞಾನದ ಮಾಲೀಕ
ನೀಡಿದ್ದೇ ಚೂರ್ಣ….!?
ಮನೆಯ ಸತ್ಯ-ಮಿಥ್ಯ
ಕಿಟಕಿಗಿಂತ ಬಾಗಿಲಿಗೇ
ಹೆಚ್ಚು ಗೊತ್ತು….
ಗೋಡೆಗಳುದರದಲಿ
ಅಡಗಿಹುದು ಗುಟ್ಟಿನ ಸ್ವತ್ತು!
ಸಂಧ್ಯಾ ಪರ್ವದ
ಮುಸುಕಿನ ತೆರೆಯಡಿಯ
ಕಿರು ದೀಪವೇ ಸೂರ್ಯ;
ನಿಧಾನದಿ ಧ್ಯಾನದ ಮುದ್ರೆಯಲಿ
ನಿದ್ರೆಗೆ ಜಾರುತಿಹನು ಆರ್ಯ !?
ಮಹಾಂತೇಶ್.ಬಿ.ನಿಟ್ಟೂರ್
[email protected]