ಕನ್ನಡಾಂಬೆಯ ಕಂಬನಿ

ಕನ್ನಡ ಮಾತೆ ಓ ನನ್ನ ಜನ್ಮದಾತೆ
ಚೆಲುವಾದ ನಿನ್ನಾ ಮೊಗದ ಮೇಲೇಕೆ
ಎದ್ದು ಕಾಣುತಿದೆ ಚಿಂತೆಯಾ ಗೆರೆ?
ಹೇಳು ತಾಯೆ ಮಾಡಲೇನು ಗೆರೆಯನಳಿಸಿ ಮತ್ತೆ
ಸೊಬಗ ತರಲು ನಿನ್ನ ಮೊಗದ ಮೇಲೆ ?
ಮೂಢ ನೀನು ಗೊತ್ತಿದ್ದೂ ಕೇಳಲೇಕೆ
ನನ್ನೀ ನಾಡಲೀಗ ನಡೆಯುತಲಿರುವುದು ತರವೇ?
ಇದು ಬರಿಯ ಗೆರೆಯಲ್ಲ ಮಗನೆ
ನೊಂದು ಬೆಂದಿರುವ ಬರೆಯ ಗೆರೆ !
ಸಂತಸದಿ ತಾಯ್ತನವ ಸವಿದೆ ಬಹುಕಾಲ
ಇತಿಹಾಸ ಪೇಳುವುದೆನ್ನ ವೈಭವದ ಕಥೆಯ:
ಬಸವ ಅಲ್ಲಮ ಮಹಾದೇವಿಯಕ್ಕ
ಕನಕ ಪುರಂದರ ಶ್ರೀಪಾದ ಜಗನ್ನಾಥ
ರನ್ನ ಪಂಪ ಕುಮಾರವ್ಯಾಸ ಹರಿಹರ
ಶಾತವಾಹನ ಚೋಳ ಚಾಳುಕ್ಯ ಪಲ್ಲವ
ರಾಷ್ಟ್ರಕೂಟ ಗಂಗ ಕದಂಬ ವಿಜಯನಗರ
ಹಕ್ಕ ಬುಕ್ಕ ವಿದ್ಯಾರಣ್ಯ ಮುದ್ದಣ ಶಿಶುನಾಳ ಸರ್ವಜ್ಞ
ಆಲಿಸು ಇವು ಬರಿ ಹೆಸರುಗಳಲ್ಲ ಮಗನೆ
ಇವು ಕನ್ನಡ ನಾಡಿನ ನಾಡಿಯ ಬಡಿತಗಳು !
ಮೆರೆಸಿದರೆನ್ನನು ಜಗದಲಿ ಕೊಟ್ಟರೆಂತಹ ಸಡಗರ !
ನನ್ನುಡಿ ಸಂಸ್ಕೃತಿ ಉಳಿಸಿ ಬೆಳೆಸಿ ಉಚ್ಛತೆಯನು ಸಾರಿ
ವಿಶ್ವಕೆ ಕಂಪನು ಪ್ರಸರಿಸಿ
ತಣಿಸಿದರೆನ್ನ ತನುವನು ಮನವನು ಬಾರಿ ಬಾರಿ !
ಕಾರಂತ ಕುವೆಂಪು ಬೇಂದ್ರೆ ಅಂದ್ರೆ
ಮೊಗದಲಿ ಮೆರೆವುದು ಸಂತಸ ಮುದ್ರೆ
ಎಂತಹ ಚಂದ ಅವರಿಂದು ಇದ್ರೆ
ನಿಮ್ಮೀ ತಾಯಿಗಿಂದು ಸುಖದ ನಿದ್ರೆ !
ನನ್ನ ನೆಲದಲಿತ್ತು ಎಂತ ಕಸುವು ಎಂತ ಸೊಗಸು
ಆದರೇನು ನೀವು ತಂದರಿಲ್ಲಿ ಎಲ್ಲ ಕಡೆಯ ಹೊಲಸು
ಕೊಳಕು ತುಂಬಿದೆ ನೀನು ಬಂದು ಕಸವ ಗುಡಿಸು
ಎಂದು ನಿನ್ನ ತಾಯಿ ನೊಂದು ನಿನ್ನ ಕರೆಯುತಿಹಳು !
ನನ್ನ ಭಾಷೆ ನನ್ನ ಜನಕೆ ಇಂದು ಬೇಡವಾಗಿದೆ
ಅನ್ಯ ಭಾಷೆ ನನ್ನ ಜನಕೆ ಇಂದು ಮೋಡಿಮಾಡಿದೆ
ಹುಚ್ಚಿದು ಬಿಡು ಮಗನೆ ತಾಯ್ಮಡಿಲು ಕೂಗಿ ಕರೆದಿದೆ
ಪೊರಕೆಹಿಡಿದು ಕಸವನೋಡಿಸಿ ಮೆರೆಯಿರಿಲ್ಲಿ ಎಂದು ಆಸೆ ತೋರಿದೆ !
ಮಾತೆ ನೀನು ಹಲುಬಲೇಕೆ ನಿನ್ನ ಮಕ್ಕಳಿಗಿಂದು
ಅರಿವು ಉಂಟು ನಮ್ಮ ನೆಲದ ಉಳಿವು
ನಿನ್ನ ಹರಕೆ ಕೊರತೆ ಇಲ್ಲದೆ ಸಿಗಲು
ಅನ್ಯರಾಕ್ರಮಣವನು ತಡೆದು ಬಡಿದು
ಕನ್ನಡತ್ವವನು ಉಳಿಸಿ ಬೆಳಸುವೆವು
ತಾಯೆ ನಿನ್ನ ಮೊಗದಿ ಮೂಡಿ ಬರಲಿ ಸಂತಸದ ಕಂಪು !!


ಅಣ್ಣಾಪುರ್ ಶಿವಕುಮಾರ್, ಲಿಬರ್ಟಿವಿಲ್
[email protected]

error: Content is protected !!