ಅಂಗಳ ಕಸಗುಡಿಸಿ
ನೆಲ ಸಾರಿಸಿ
ಬಿಡುವ ರಂಗಿನ ರಂಗೋಲಿಗೆ
ಯಾವ ಚಿತ್ರ ಬಿಡಿಸಲಿ
ಎಂಬ ದ್ವಂದ್ವ.
ಆ ಬೆಳ್ಳಂಬೆಳಗ್ಗೆ ಹಾಡಿದ ಕೋಕಿಲ
ಗಾನ… ಮನಕೆ ಮತ್ತೆ ಹರೆಯ ಮೂಡಿ
ಅಂಗಳದಲ್ಲಿ ಮೂಡಿ ನಿಂತ
ಅಳಿಸಲಾದ ಚಿತ್ರ ಮರೆಯಾದ ಚಿತ್ರ ಬಿಡಿಸುವ ದ್ವಂದ್ವ.
ಎದ್ದು ಒಳ ಬರುವ ಭರದಲ್ಲಿ ನಾಚಿ ಬರಿ ಪಾದಕೆ ನೆಟ್ಟ ಗರಿಕೆ
ಅದ ಕಿತ್ತೆಸೆಯದ್ದು
ಕಾರುಣ್ಯವೋ, ಅಸಹಾಯಕತೆಯೋ…
ಗರಿಕೆ ಮಾತ್ರ ತ್ರಿವಿಕ್ರಮ
ಬರಿ ಪಾದವಿನ್ನೂ ವಾಮನ
ಚುಚ್ಚಿಸಿಕೊಳ್ಳುವ ಬರಿ ಪಾದಗಳಲ್ಲಿ
ಆಗೀಗ ಒಸರುವ ಅತ್ತರೂ ನಿಲ್ಲದ ನೆತ್ತರು.
ಇತ್ತ ಕೈ ತಪ್ಪಿ ನೆಲಕೆ ಬಿದ್ದ ಎಣ್ಣೆ
ಅತ್ತ ಶತಮಾನ ಕಂಡ
ಬಿಕ್ಕಳಿಸುವ ಹಣತೆ
ನಡುಗುವ ಕೈಗಳ ಮುದುಕಿಗೆ
ಅಮೃತ ಮಹೋತ್ಸವ ಹೊಸ್ತಿಲ ಸಂಭ್ರಮ
ಅಮವಾಸ್ಯೆಯ ತೀರಿಸದ ಹಳಹಳಿಕೆ.
ಮುನ್ನಡೆವ ಪಾದಗಳಿಗಿನ್ನೂ
ಸಿಗದ ಸಮಾಧಾನ ಮನದ
ತಳದಲ್ಲುಳಿದ ತಡವರಿಕೆ
ಅಸಂಖ್ಯ ಕನಸಿನ ಹೆಜ್ಜೆಗಳಿಗೋ ಆ ಗುರಿ.
ಸಾವಿರ ಯೋಜನ ದೂರ
ಉಳಿದವರದ್ದು ವೈಚಾರಿಕತೆ
ವಿಜ್ಞಾನ ಪ್ರಯೋಗ ಎಂಬ ದಾಪುಗಾಲು
ಎಣ್ಣೆಯಲಿ ನೆನೆದ ಕಂದೀಲು ಪೆಟ್ಟಿಗೆ ಇನ್ನೂ ಹಸಿ ಹಸಿ….
ಜಡ್ಡುಗಟ್ಟಿದೆ ಜಾಣತನ
ನಿತ್ಯ ಎದ್ದು ಬಂದು
ಬೆಳಗ ನೀಡುವ ಸೂರ್ಯನಿಗೂ
ಇಲ್ಲಿ ಕಳೆಯದ ಕತ್ತಲ ಬಗ್ಗೆ
ತಪ್ಪಿತಸ್ಥ ಭಾವ
ತಿಂಗಳ ರಾತ್ರಿಗಳಿಗೂ ಮಬ್ಬು
ಹರಿಯದ ಅನುಮಾನ.
ಎಂ.ಎಸ್. ಮಲ್ಲಿಕಾರ್ಜುನಯ್ಯ
ಪ್ರಾಂಶುಪಾಲರು, ಬೆಳವನೂರು.
97318 15332