ಹಿತ್ತಲಗಿಡವೂ ನನ್ನ ಬಾಲ್ಯದ ಪಟವೂ…

ಅಂದು ನನ್ನ ಜೀವನದ ಬಾಲ್ಯವ
ಸುಮ್ಮನೆ ರೂಪಿಸಿದ ಅರ್ಧ ಶತಮಾನದ
ನಮ್ಮನೆ ಮಹಾಮನೆ !
ಅಪ್ಪ-ಅವ್ವ ಕಷ್ಟಪಟ್ಟು ಕಟ್ಟಿದ
ಹೆಮ್ಮೆಯ ಈ ನಮ್ಮ ಹೆಮ್ಮನೆಯ ಹಿತ್ತಲ
ಬಚ್ಚಲ ಸಿಮೆಂಟ್ ಕಿಟಕಿಯ ಸಂದಿಯಲಿ
ಬೆಳೆದ ಬಸವನಪಾದದ ಹೂವಿನ ಗಿಡದಲರಳಿದ
ಹೂವುಗಳು ನಗೆಯ ಬೀರಿದವು ಇಂದು
2020 ರ ಮೇ 29 ರಂದು ಸ್ವಾಗತಿಸುತ
ನಿನ್ನಂತೆ ನಾನೂ ಬೆಳೆದಿರುವೆನೆಂಬುದ
ಹೇಳಿಕೊಳುವಂತೆ ತೂಗಾಡಿಕೊಂಡವು
ಉರಿಬಿಸಿಲ ಝಳವಲೆಕ್ಕಿಸದೆ
ನಾನು ನೇವರಿಸಿ, ಮೊಬೈಲಿಂದ ಅದರ ಸೊಬಗ
ಸೆರೆಹಿಡಿದು ಹೊತ್ತು ತಂದೆ ಜೊತೆಗೆ ನೆನಪುಗಳ ಭಾರದ
ಮೂಟೆಗಳ ಹಗುರ ಹಗುರೆನಿಸು ಸವಿನೆನಪುಗಳ
ಒಳಗೆ ನಡುಮನೆಯ ಗೋಡೆಯ
ಮೊಳೆಗೆ ಮುಗ್ಧತನದಿಂದ
ಜೋತುಬಿದ್ದಿದ್ದ ದಾವಣಗೆರೆ
ಎಗ್ಸಿಬಿಷನ್ ನಲ್ಲಿ ಅಂದೆಂದೋ ತೆಗೆಸಿದ
ಕಮಲದಲರಳಿದಂತೆ ತೋರುವ ನನ್ನ ಈ ಬಾಲ್ಯದ ಚಿತ್ರಪಟ
ಅರ್ಧಶತಮಾನದ ಹಿಂದಿನವೆಲ್ಲ
ದೃಶ್ಯಗಳ ಕಣ್ಮನ ತುಂಬಿಸಿತು
ಹೇಳಲಸದಳವೆನಿಪ ಪರಮಾನಂದ
ಸುಖವುಣಿಸಿ ತಣಿಸಿತು
ಇಂದು ನಮ್ಮ ಹಿತ್ತಲಗಿಡದ ಹೂವ
ಹೆಕ್ಕಿ ಪೂಜಿಸಲು ಯಾರೂ ಮನೆಯಲಿಲ್ಲ
ಬಾಲ್ಯದ ಈ  ಪೋಟೋಫ್ರೇಮಿನ ಗ್ಲಾಸ್ ಚೂರಾಗಿದೆ
ಒಡೆದು ಎಂದೋ ಯಾಕೋ ಏನೋ
ಆದರೂ ನಿಚ್ಚಳವಾಗಿದೆ ಆ ಬಾಲ್ಯದ
ಕಪ್ಪುಬಿಳುಪು ಚಿತ್ರ ಗಿಡದ ಹೂನಂತೆ
ಈ ಬಣ್ಣದ ಲೋಕದಲ್ಲಿ ಇದೊಂದು
ಬೆಲೆಕಟ್ಟಲಾಗದ ಮಹಾಮೌಲ್ಯದ
ರಸಕ್ಷಣಗಳ  ಐತಿಹ್ಯದ ಚೌಕಟ್ಟು 
ಗಿಡದ ಹಟವೋ ಛಲವೋ
ಮಣ್ಣಸತ್ವವೋ ಸಿಮೆಂಟಿನ ಕಿಟಕಿಯ
ಬಿಗಿಹಿಡಿದು ಕೂತಿರುವ ಆಳದ
ಮಣ್ಣಕಣದ ಸಂಸ್ಕಾರವೋ ಗಿಡದಲಿ
ಹೂವರಳಿಸಿದೆ ಕಾಣದ ಮಮತೆ ತೋರಿ
ಆದರೆ,  ಯೌವನದ ಅನಿವಾರ್ಯ
ನಡೆಗೆ ಪಟ್ಟಣ ಮೆಟ್ಟಿರುವ ಕಾರಣ
ಹಳ್ಳಿಯ ನಮ್ಮ ಮನೆಯ ಎಲ್ಲಾ
ಬಾಗಿಲುಗಳು ಮುಚ್ಚಿಕೊಂಡು ನನ್ನ
ಹಳೆಯ ದಿನಗಳ ಜೋಪಾನವಾಗಿಟ್ಟು ಕೊಂಡಿವೆ ರಾಮನ
ಬರುವಿಗಾಗಿ ಕಾಯ್ದು ಕೂತ ಪ್ರೇಮಿತೆ
ಪೂಜಿಪೆ ಮುದಿಶಬರಿಯಂತೆ
ಅಪ್ಪ ಅವ್ವನ ಹೃನ್ಮನಗಳ ಭವ್ಯಕನಸಿನಂತೆ…


ಹಿತ್ತಲಗಿಡವೂ ನನ್ನ ಬಾಲ್ಯದ ಪಟವೂ... - Janathavaniಆರ್. ಶಿವಕುಮಾರಸ್ವಾಮಿ ಕುರ್ಕಿ
[email protected]

 

error: Content is protected !!