ಸಂಪ್ರದಾಯಕ್ಕೊಂದು ಹೆಣ್ಮನದ ಪ್ರಶ್ನೆ…

ಗಂಡನಿಲ್ಲದೊಡೆ ಹೂ ಕುಂಕುಮ ಬಿಡಲೇಕೆ?
ಬಾಳೆಲ್ಲ ಬಿಳಿ ಬಟ್ಟೆ  ತೊಡಲೇಕೆ?|
ನಿಡುಸುಯ್ದು ಕಣ್ಣೀರ ಕಾಲುವೆ ಹರಿಸಲೇಕೆ??
ಬಾಲ್ಯದಿಂದಲೇ ತೊಟ್ಟ ಕೈಬಳೆಯ ಅಂದಕ್ಕೆ
ಮೋಹದ ಕಾಲ್ಗೆಜ್ಜೆ ನಾದಕ್ಕೆ|
ನವಿಲಾಗೋ ಹೆಣ್ಮನವ ತಂತಾನೇ ಅಳಿಸಲೇಕೆ??
ಬಣ್ಣ-ಬಣ್ಣದ  ಉಡುಗೆ ವಾಂಛೆಯ ಈ  ತೊಡುಗೆ
ಮನಕೆ ನೀಡುವ ಮುದವ ಕಳೆಯಲೇಕೆ?|
ಕಳೆದು ಮನದ ಕೊಳದೊಳಗೊಳಗೆ ಕುದಿಯಲೇಕೆ??
ಗಂಡನಿಲ್ಲದ ಚರಿತೆ ಭರಿಸಲಾಗದ ಕೊರತೆ
ಉಡು-ತೊಡುವ ಮೈಮನವ ಮಣಿಸಲೇಕೆ?|
ಚೆಲುವ ಕಳೆದು ಕುಂದಿದಂತೆ ದಿನ ಕಳೆಯಲೇಕೆ??
ಮದುವೆಯೆಂಬುದು ಜನ್ಮ-ಜನ್ಮದ ಬಂಧ
ಸಾವಿನಾಚೆಗೂ ಬೆಂಬತ್ತಿ ಬಹುದಾದರೆ?|
ಈಗಿನ ಸಾವಿಗೆ ಬೆಲೆಯ ಕೊಡಬೇಕೇಕೆ??
ಮದುವೆಯೆಂಬುದು ನನಗೂ ಬಂಧವೇ ಅವನಂತೆ
ಅವನಿಲ್ಲದಿದ್ದರೂ ಅವನ ನೆನಪೇ|
ನೇಯುವ ಗುರುತನ್ನು ಕೊರಳಿಂದ ನಾ ಕಡೆಯಲೇಕೆ?
ಕೊರಗಿನ ಕಾರ್ಮುಗಿಲ ಚಂದಿರ ‌ಸಿಂಗಾರ
ಸಿಂಗರಿಸಿಕೊಳ್ಳದೇ ತೊಳಲಲೇಕೆ?|
ತಂಪನೆರೆವ ಈ ಸೊಬಗ ಕಳೆಯಲೇಕೆ??
ಕತ್ತಲೆಯ ಬದುಕಿಗೆ ಬೆಳ್ಳಿಯ ಬೆರಗಾಗೊ
ನನ್ನದೇ ಅಂದವ ಸಂಪ್ರದಾಯಕೆ ತೆತ್ತು |
ಅಜ್ಜನ ಆಲಕ್ಕೆ ನೇತು ಬೀಳಲೇಕೆ?


ವೀಣಾ ಪಿ., ಉಪನ್ಯಾಸಕರು
ಹರಿಹರ.

error: Content is protected !!