ಶ್ಯಾಣೆ ಆಗ್ಯಾನ ನನ ಮಗ ಶ್ಯಾಣೆ ಆಗ್ಯಾನ
ವಿದ್ಯೆ ಕಲಿತಾನ ನನಮಗ ಬುದ್ದಿವಂತ ಆಗ್ಯಾನ ||
ಆರನೆ ವರುಷಾಕ ಸರ್ಕಾರಿ ಶಾಲೆ ಸೇರ್ಯಾನ
ಪಕ್ಕದಿ ಕುಳಿತ ಹುಡುಗನ ಜೋಡಿ ಜಗಳ ಆಡ್ಯಾನ
ಸ್ಲೇಟಿಲಿ ತಲೆಗೆ ಹೊಡೆದಾನ, ಮನೇಲಿ ಬಚ್ಚಿಕುಂತಾನ||
ಹನ್ನೆರಡೊರುಷಕ ನವೋದಯ ಪರೀಕ್ಷೆ ಕಟ್ಯಾನ
ಪಾಠದ ಟೀಚರ್ ಜಡೆಯ ಎಳೆದು ಬೈಸಿಕೊಂಡಾನ
ಕಪಾಳಕ್ಕ್ಹೊಡೆಸಿಕೊಂಡಾನ, ಪರೀಕ್ಷೆ ಪಾಸು ಮಾಡ್ಯಾನ||
ಹದಿನೆಂಟುವರುಷಾಕ ಪಿಯುಸಿ ಪರೀಕ್ಷೆ ಕಟ್ಯಾನ
ಪಕ್ಕದ್ಮನೆ ಹುಡುಗಿ ರೇಗ್ಸಿ ಜೈಲಿಗೆ ಹೋಗ್ಯಾನ
ಹೆಂಗೋ ಏನೋ ಡಾಕ್ಟರ್ ಕೋರ್ಸ್ ಸೀಟು ಪಡೆದಾನ, ಬೆಂಗಳೂರಿಗೆ ಹೊಂಟಾನ||
ತಿಂಗಳ ತಿಂಗಳ ಹೆಚಿಗಿ ದುಡ್ಡು ಕಳಿಸು ಅಂದಾನ ಜೊತೆಯಲಿ ಓದೋ ಹುಡುಗಿಯನ್ನು ಪ್ರೀತಿ ಮಾಡ್ಯಾನ
ಬ್ಯಾಡ ಅಂದ್ರೂ ಹಠ ಮಾಡಿ ಮದುವೆ ಆಗ್ಯಾನ, ಸೊಸಿ ತಂದು ತೋರ್ಸ್ಯಾನ||
ಅಂತೂ ಇಂತೂ ಓದು ಮುಗಿಸಿ ಡಾಕ್ಟರ್ ಆಗ್ಯಾನ,
ಬ್ಯಾಂಕಿನಾಗ ಸಾಲ ಮಾಡಿ ಮನಿಯ ಕಟ್ಯಾನ
ಹೆಂಡತಿ ಜೋಡಿ ಹೊಸಾಮನೆಯ ಪ್ರವೇಶ ಮಾಡ್ಯಾನ, ಮಕ್ಕಳ ಶಾಲೆಗೆ ಸೇರ್ಸ್ಯಾನ||
ಕರೋನ ಎಂಬ ಮಹಾಮಾರಿ ಎದುರಿಸಿ ನಿಂತಾನ,
ಹೆಂಡತಿ ಜೋಡಿ ಭಾರತ ದೇಶದ ಸೇವೆಗೆ ನಿಂತಾನ,
ಹಗಲು-ಇರುಳು ಎನ್ನದೆ ಸೋಂಕಿತ್ರ ಸೇವೆ ಮಾಡ್ಯಾನ
ದೇಶದ ಮೆಚ್ಚುಗೆ ಪಡೆದಾನ||
ಗುರುಪ್ರಸಾದ್ ಜೆ ಎಸ್.
ದಾವಣಗೆರೆ.
[email protected]