ಗುದ್ದು….

ಮನುಜನ ಕಡು ಸ್ವಾರ್ಥಕ್ಕಿಂದು
ಮಂದಿರ ಮಸೀದಿ ಚರ್ಚುಗಳೆಲ್ಲ
ಬಾಗಿಲು ಮುಚ್ಚಿವೆ
ದೇವರು ಕೂಡ ಕಂಗಾಲು.
ಆ ಗ್ರಹ ಈ ಗ್ರಹ ಗ್ರಹಗತಿಗಳೆಂದು
ಬೊಬ್ಬೆ ಹಾಕುವ, ಸದ್ದುಗಳು ತಣ್ಣಗಾಗಿವೆ
ಸರ್ವಸೃಷ್ಟಿ ಯಾರೆಂದು
ತಿಳಿಯದೇ ದೇವರೂ ತಣ್ಣಗಾಗಿದ್ದಾನೆ.
ಮಂಗಳಕ್ಕೆ ಹೋದರು
ಅಂಗಳಕ್ಕೆ ಬಾರದ ಮಂಗಗಳಾಗಿಹ
ನಮ್ಮಗಳ ಕಂಡು ಯಮನು ಕೂಡ
ನಾನೇಕೆ ಹೋಗಲಿ ಅವರೇ ಬರುವರು
ಬಲು ಬುದ್ಧಿವಂತರೆಂದು ತಣ್ಣಗಾಗಿದ್ದಾನೆ.
ಬಡವ ಬಲ್ಲಿದ, ಮೇಲು ಕೀಳು
ಜಾತಿಗೊಂದು ನೀತಿ ಬರೆದುಕೊಂಡವರು
ಮಾಡಿದ ಪಾಪಗಳ ನೆನೆಯಲು
ಭೂ ಮಡಿಲಲ್ಲಿ  ಮಲಗಲು ಇದೀಗ
ಯಶಸ್ಸು ಕಂಡಂತಿದೆ.
ದೇವರನ್ನು ದೂರದಿಂದ
ನೋಡಿ ಹೋಗೆಂದವರೇ
ದೂರನಿಂತು ದೇವರಿಗೆ
ಕೈಮುಗಿಯುತಿಹರು ಕಾಲಚಕ್ರ ತಿರುಗಿಸಿ
ದೇವರು ದಯೆ ತೋರದೆ ತಣ್ಣಗಾಗಿದ್ದಾನೆ.
ಮುಟ್ಟುವಂತಿಲ್ಲ, ನಿಲ್ಲುವಂತಿಲ್ಲ
ಕೂರುವಂತಿಲ್ಲ, ಎಲ್ಲವೂ ಗೆರೆ ಎಳೆದು
ನಡೆಯುತ್ತಿದೆ ಪ್ರಕೃತಿಯ ಉಳಿವಿಗಾಗಿ
ಮೊದಲೇ ಗೆರೆ ಎಳೆದಿದ್ದರೆ..?
ಅಹಂ ಎಂಬ  ದೊಡ್ಡ ವೈರಸ್ಸು
ನಮ್ಮೊಳಗಿರುವಾಗ ಅದು ಹೇಗೆ ಸಿಕ್ಕೀತು
ಇವಕ್ಕೆಲ್ಲ ಮದ್ದು ಇದೆಲ್ಲವೂ
ಕೊನೆಯಾದರೆ ಸಿಕ್ಕಬಹುದು ಮದ್ದು
ಇಲ್ಲವಾದರೆ ದೇವರು ಆಗಾಗ ಕೊಟ್ಟು
ಸುಮ್ಮನಾಗುವನು ಗುದ್ದು.


ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.

error: Content is protected !!