ಎಳ್ಳು ಬೆಲ್ಲವ ಸವಿಯೋಣ
ಒಳ್ಳೆಯ ಮಾತುಗಳಾಡೋಣ
ಸಂಕ್ರಾಂತಿ ಹಬ್ಬದಿ ನಲಿಯೋಣ
ಸಂತೋಷವನು ಹಂಚೋಣ.
ಕಬ್ಬಿನ ಸಿಹಿಯನು ಹೀರುತಲಿ
ಮನಸಿನ ಕಹಿಯನು ಮರೆಯೋಣ
ಸಿಹಿ ಕಹಿಗಳನು ಸಮಚಿತ್ತದಲಿ
ಸ್ವೀಕರಿಸುತ ಮುನ್ನಡೆಯೋಣ.
ದ್ವೇಷವ ಮರೆತು ಸ್ನೇಹದಿ ಕಲೆತು
ಭಾವೈಕ್ಯತೆಯನು ಮೆರೆಸೋಣ
ಜಗಳ, ಕದನ,ಕೋಪವ ತೊರೆದು
ಹರುಷದಿ ಎಲ್ಲರು ಬಾಳೋಣ.
ರೈತಾಪಿ ಜನರು ದನಕರುಗಳಿಗೆ
ಪೂಜೆಯ ಮಾಡುತ ನಮಿಸುವರು
ಮೆರವಣಿಗೆಯಲಿ ಸಿಂಗಾರ ಮಾಡಿ
ಕಿಚ್ಚನು ಹಾಯಿಸಿ ನಲಿಯುವರು.
ಉತ್ತರಾಯಣದ ಪುಣ್ಯಕಾಲವಿದು
ಬರುವುದು ವರ್ಷದಲೊಂದು ದಿನ
ದಕ್ಷಿಣದಿಂದ ಉತ್ತರ ದಿಕ್ಕಿಗೆ
ಪ್ರಾರಂಭವು ಸೂರ್ಯನ ಪಯಣ.
ವರ್ಷದಲ್ಲಿಯೇ ಪುಣ್ಯಕಾಲವಿದು
ಸ್ವರ್ಗದ ಬಾಗಿಲು ತೆರೆದಿಹುದು
ಎನ್ನುವ ನಂಬಿಕೆಯಿಂದಲಿ ನಮ್ಮಯ
ಬದುಕಲಿ ಸಂ….ಕ್ರಾಂತಿಯ ನಡೆಸೋಣ.
ಹಬ್ಬಗಳೆಲ್ಲ ಯಾಂತ್ರಿಕವಾಗದೆ
ಸಾಂಪ್ರದಾಯಿಕವಾಗಿರಿಸೋಣ
ಗುರು-ಹಿರಿಯರು ತೋರಿದ ಸನ್ಮಾರ್ಗದಿ
ನಡೆಯುತ ಬಾಳನು ಬೆಳಗೋಣ.
ಎಳ್ಳು ಬೆಲ್ಲ ಇಲ್ಲದ ಸಂಕ್ರಾಂತಿಯ
ಕಲ್ಪಿಸಿಕೊಳ್ಳುವುದಸಾಧ್ಯವು
ಒಬ್ಬರಿಗೊಬ್ಬರು ಹಂಚಿದಾಗಲೇ
ಬೆಳೆವುದು ಸುಮಧುರ ಬಾಂಧವ್ಯವು.
ಜಿ.ಎಸ್.ಗಾಯತ್ರಿ, ಶಿಕ್ಷಕಿ
ಬಾಪೂಜಿ ಶಾಲೆ, ಹರಿಹರ
83108 77083