ಈಡೇರಿಸೆನ್ನ ಕೋರಿಕೆಯ

ಬದುಕ ಬಂಡಿಯಲ್ಲಿ ಸಿರಿತನವ
ನೀಡಲೆಂದು ಬೇಡೆನು ನಾನು…
ಬೇಡಿದವರಿಗೆ ತುತ್ತು ಅನ್ನ ನೀಡುವ
ಸಿರಿವಂತಿಕೆಯ ನೀಡು ನನಗೆ..

ಕಲಿತ ವಿದ್ಯೆಯನ್ನು ಸ್ವಾರ್ಥಕ್ಕೆ ಬಳಸುವಲ್ಲಿ
ಬಂಡವಾಳದ ಜ್ಞಾನ ಬೇಡ ನನಗೆ…
ನನ್ನ ಮಕ್ಕಳಿಗೆ ಬದುಕಿನ ಪಾಠ ಕಲಿಸುವ
ಜ್ಞಾನವ ನೀಡು ನನಗೆ…

ಗಗನವ ಚುಂಬಿಸುತ್ತಾ ಚಂದ್ರನ ಸವಾರಿ
ಮಾಡುವ ಆಸೆ ಇಲ್ಲ ನನಗೆ…
ಬೆಳದಿಂಗಳ ರಾತ್ರಿಯಲ್ಲಿ ಚಂದ್ರನ ಬೆಳಕಲ್ಲಿ
ನೆಮ್ಮದಿಯ ನಿದ್ರೆ ನೀಡು ನನಗೆ..

ವಜ್ರ ವೈಢೂರ್ಯಗಳ ದಾನವ ನೀಡಿ
ಭಿಕ್ಷೆ ಬೇಡುವ ಹಂಬಲ ಇಲ್ಲ ನನಗೆ…
ನಿರ್ಮಲ ಭಕುತಿಯ ನೈವೇದ್ಯವ ನೀಡುವೆ
ಸೃಜನ ಸಂಪನ್ನ ಗುಣವಾ ನೀಡು ನನಗೆ..

ಕಲ್ಲಿನ ದೇವರ ಮೂರ್ತಿಯ ನಿಲ್ಲಿಸಿ
ನಿನಗಾಗಿ ಗುಡಿಯಾ ಕಟ್ಟಲಾರೆ ನಾನು…
ಕಲ್ಲಾದ ಶಿಲೆಯಲ್ಲಿ ಜೀವಂತಿಕೆಯ ಕಾಣುವೆನು
ನಿನ್ನ ಚರಣದಲ್ಲಿ ಧೂಳಾಗುವಾಸೆ ನನಗೆ….

ನನ್ನದೊಂದು ಕೋರಿಕೆಯು ನಿನ್ನಲ್ಲಿ
ಭೀತಿ ಇಲ್ಲದ ಬದುಕ ನೀಡು..
ಸ್ವಾರ್ಥ ಸರಕಾರವನ್ನು ಬದಿಗೊತ್ತಿ
ಸುಂದರ ಪರಿಸರವ ನೀಡು ನನಗೆ.

ನಿನ್ನಂತೆ ಯಾರಿಹರು ಲೋಕದಲ್ಲಿ
ಭಕುತಿಯು ನೀನೇ ಮುಕುತಿಯು ನೀನೇ
ಈಡೇರಿಸೆನ್ನ ಕೋರಿಕೆಯ…


ಪ್ರಿಯಾಂಕ ಚಂದ್ರಕಾಂತ್
ದಾವಣಗೆರೆ.
priyanka0411190@gmail.com

 

error: Content is protected !!