ದಾವಣಗೆರೆ,ಡಿ.9- ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಬಿ.ಶೇಖರಪ್ಪ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು.
ಶೇಖರಪ್ಪ ಅವರ ಹೆಸರನ್ನು ನಿರ್ದೇಶಕ ಜಗದೀಶಪ್ಪ ಬಣಕಾರ್ ಸೂಚಿಸಿದರೆ, ನಿರ್ದೇಶಕ ಜಿ.ಎನ್. ಸ್ವಾಮಿ ಅನುಮೋದಿಸಿದರು.
ಈವರೆಗೂ ಉಪಾಧ್ಯಕ್ಷರಾಗಿದ್ದ ಬಿ.ಕೆ. ಪ್ರಕಾಶ್ ಅವರು ಹರಪನಹಳ್ಳಿ ತಾಲ್ಲೂಕಿನವರಾಗಿದ್ದು, ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಕಾರಣ, ಆ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯಿತು.
ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಆರ್. ಷಣ್ಮುಖಪ್ಪ, ನಿರ್ದೇಶಕರುಗಳಾದ ಬಿ.ವಿ. ಚಂದ್ರಶೇಖರ್, ಜೆ.ಎಸ್. ವೇಣುಗೋಪಾಲ ರೆಡ್ಡಿ, ಕೆ.ಹೆಚ್. ಷಣ್ಮುಖಪ್ಪ, ಆರ್.ಜಿ. ಶ್ರೀನಿವಾಸಮೂರ್ತಿ, ಬಿ.ಹಾಲೇಶಪ್ಪ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಗೋಪನಾಳ್ ಹೆಚ್.ಕೆ. ಪಾಲಾಕ್ಷಪ್ಪ, ಸರ್ಕಾರದ ಪ್ರತಿನಿಧಿ ಜೀವನ ಪ್ರಕಾಶ್, ಸಹಕಾರ ಸಂಘಗಳ ಉಪ ನಿಬಂಧಕ ಬಿ.ಜಯಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಹೆಚ್.ಲಕ್ಷ್ಮಣ್ ಅವರುಗಳು ಸಭೆಯ ಕಾರ್ಯಕಲಾಪದಲ್ಲಿ ಭಾಗವಹಿಸಿದ್ದರು.
ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.