ದಾವಣಗೆರೆ, ಡಿ.6- ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಇಂದು ಅಂಬೇಡ್ಕರ್ ಅವರನ್ನು ಸ್ಮರಿಸಲಾಯಿತು.
ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಸಮಿತಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಜಾತಿ ವ್ಯವಸ್ಥೆಯನ್ನು ಬದಲಾವಣೆ ಮಾಡುವಲ್ಲಿ ಅಂಬೇಡ್ಕರ್ ಅವರು ಮಾಡಿದ ಹೋರಾಟ ನಿಜಕ್ಕೂ ಮರೆಯಲಾಗದು ಎಂದು ಕುಂದವಾಡ ಮಂಜುನಾಥ್ ತಿಳಿಸಿದರು. ಪ್ರಜಾಪ್ರಭುತ್ವದಲ್ಲಿ ಸಹಬಾಳ್ವೆಯಿಂದ ಬದುಕಲು ದಾರಿ ತೋರಿಸಿಕೊಟ್ಟಂತವರು ನಮ್ಮ ಹೆಮ್ಮೆಯ ಅಂಬೇಡ್ಕರ್ ಅವರು ನಮ್ಮ ದೇಶದಲ್ಲಿ ಹುಟ್ಟಿದ್ದಾರೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸತ್ಯಪ್ಪ, ಬುಳ್ಳಸಾಗರ ಸಿದ್ದರಾಮಣ್ಣ, ತಾಲ್ಲೂಕು ಸಂಚಾಲಕ ಪರಮೇಶ್ ಪುಟಗನಾಳ್, ಪ್ರದೀಪ್ ಕೆಟಿಜೆ ನಗರ, ಗೋಪನಾಳ್ ಚಂದ್ರಪ್ಪ, ಬಾತಿ ಸಿದ್ದೇಶ್, ಯುವ ಒಕ್ಕೂಟದ ಕುಂದವಾಡ ಮಂಜುನಾಥ್, ಅಣಜಿ ಹನುಮಂತಪ್ಪ, ಬೇತೂರು ಹನುಮಂತಪ್ಪ, ದುರ್ಗಾಪ್ರಸಾದ್ ಸೇರಿದಂತೆ ಇತರರು ಇದ್ದರು.