ರಾಣೇಬೆನ್ನೂರು ನಗರಸಭೆ ಬಿಜೆಪಿ ವಶ

ರಾಣೇಬೆನ್ನೂರು ನಗರಸಭೆ ಬಿಜೆಪಿ ವಶ - Janathavaniರಾಣೇಬೆನ್ನೂರು, ನ.1- ಎರಡು ವರ್ಷದ ಬಳಿಕ ಇಂದು ನಡೆದ ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ರೂಪಾ ಚಿನ್ನಿಕಟ್ಟಿ ಅಧ್ಯಕ್ಷರಾಗಿ, ಕಸ್ತೂರಿ ಚಿಕ್ಕಬಿದರಿ ಉಪಾಧ್ಯಕ್ಷರಾಗಿ ಬಹುಮತ  ಪಡೆದು ಆಯ್ಕೆಯಾಗುವುದರೊಂದಿಗೆ ನಗರಸಭೆ ಆಡಳಿತವನ್ನು ಬಿಜೆಪಿ ಪಡೆದುಕೊಂಡಿತು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಪಿಜೆಪಿಯ ಸದಸ್ಯರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಅದರನ್ವಯ ನಾಲ್ವರು   ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆಂದು ಅಂದಾಜಿಸಲಾಗಿತ್ತು. ರಾಜಕೀಯ ತಂತ್ರಗಾರಿಕೆಯಿಂದಾಗಿ ನಿಂಗರಾಜ ಕೋಡಿಹಳ್ಳಿ ಅವರನ್ನು ಹೊರತುಪಡಿಸಿ ಉಳಿದವರು ಬಿಜೆಪಿಗೆ ಮತ ನೀಡಿದರೆಂದು, ಇದನ್ನು ಪತ್ರಿಕಾಗೋಷ್ಠಿಯಲ್ಲಿ ಶಾಸಕರು ದೃಢೀಕರಿಸಿದ್ದು ಕೇಳಿಬಂದಿತು.

ತವರಿನ ಉಡುಗೊರೆ : ಅಧ್ಯಕ್ಷ ಗಾದೆಯ ಆಕಾಂಕ್ಷಿ ಕವಿತಾ ಹೆದ್ದೇರಿ ಅವರ ಪರವಾಗಿ ಪಕ್ಷೇತರ, ಕೆಪಿಜೆಪಿ ಮತ್ತು ಬಿಜೆಪಿಯ ಕೆಲ ಸದಸ್ಯರು ಬಿಗಿಪಟ್ಟು ಹಿಡಿದಿದ್ದರಿಂದ ಆಯ್ಕೆಯ ಕಸರತ್ತು ರಾಣೇಬೆನ್ನೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದ ರಾಘವೇಂದ್ರ ಅವರು  ತಮ್ಮೂರಿನ ಮಗಳು ರೂಪಾ ಚಿನ್ನಿಕಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ ತವರಿನ ಉಡುಗೊರೆ ನೀಡಿದರು ಎಂದು ಹೇಳಲಾಗುತ್ತಿದೆ.

ಅವಧಿ ಹಂಚಿಕೆ : ಆಕಾಂಕ್ಷಿಗಳ ಸಂಖ್ಯೆ ಮೂರಕ್ಕೇರಿದ್ದರಿಂದ ಅಧ್ಯಕ್ಷರ ಅವಧಿಯನ್ನು ತಲಾ ಹತ್ತು ತಿಂಗಳೆಂದು, ಇನ್ನೊಂದು ಮೂಲದ ಪ್ರಕಾರ ಹದಿನೈದು ತಿಂಗಳಿನಂತೆ ಇಬ್ಬರಿಗೆ ಹಂಚುವ ಒಡಂಬಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಒಡಂಬಡಿಕೆ ಉಪಾಧ್ಯಕ್ಷರಿಗೂ ಅನ್ವಯವಾಗಲಿದೆ ಎನ್ನುವ ಮಾತುಗಳು ಕೇಳಿಬಂದವು.

ಪ್ರಥಮ ಬಾರಿಗೆ ಮತದಾನ : ಅಧ್ಯಕ್ಷರಾಯ್ಕೆಯು  ಇದುವರೆಗಿನ  ಯಾವ ಚುನಾವಣೆಯಲ್ಲೂ  ಶಾಸಕರನ್ನು ಹೊರತುಪಡಿಸಿ ಪರಿಷತ್ ಸದಸ್ಯರು (ನಗರದ ಮತದಾರ), ಸಂಸದರು ಭಾಗವಹಿಸಿರಲಿಲ್ಲ. ಇದೇ ಪ್ರಥಮ ಬಾರಿಗೆ ಸಂಸದ ಶಿವಕುಮಾರ ಉದಾಸಿ, ಪರಿಷತ್ ಸದಸ್ಯ ಶಂಕರ್ ಇಂದು ಮತದಾನ ಮಾಡಿದರು. 

ಒಂಭತ್ತು ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂಪಕ ಬಿಸಲಳ್ಳಿ ಹಾಗೂ ಉಪಾಧ್ಯಕ್ಷ ಸ್ಥಾನದ ನೀಲಮ್ಮ ಮಾಕನೂರ ಅವರು ಕೆಪಿಜೆಪಿಯ ಒಂದು ಮತ ಸೇರಿದಂತೆ ತಲಾ ಹತ್ತು ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ಹಾವೇರಿ ಉಪವಿಭಾಗಾಧಿಕಾರಿ ದಿಲೀಶ ಸಸಿ ಆಗಮಿಸಿದ್ದರು.

error: Content is protected !!