ನೂತನ ಶಿಕ್ಷಣ ನೀತಿ ಕುರಿತ ಉಪನ್ಯಾಸದಲ್ಲಿ ಡಾ. ಕೆ.ಎನ್. ಸುಬ್ರಹ್ಮಣ್ಯ
ದಾವಣಗೆರೆ, ಮಾ. 13 – ಸಾವಿರಾರು ವರ್ಷಗಳಿಂದ ಭಾರತೀಯರು ಹೊಂದಿದ್ದ ಅನ್ವೇಷಣೆ ಹಾಗೂ ತಂತ್ರಜ್ಞಾನದ ಪರಿಣಿತಿ ಬ್ರಿಟಿಷರು ಜಾರಿಗೆ ತಂದ ಬಾಯಿ ಪಾಠದ ಶಿಕ್ಷಣ ಪದ್ಧತಿಯಿಂದ ನಾಶವಾಗಿದೆ. ನೂತನ ಶಿಕ್ಷಣ ನೀತಿಯು ಮತ್ತೆ ಅನ್ವೇಷಣೆ ಹಾಗೂ ಶೈಕ್ಷಣಿಕ ಸುಧಾರಣೆಗೆ ಅವಕಾಶ ನೀಡಿದೆ ಎಂದು ಬೆಂಗಳೂರಿನ ಆರ್.ವಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕೆ.ಎನ್. ಸುಬ್ರಹ್ಮಣ್ಯ ಅಭಿಪ್ರಾಯ ಪಟ್ಟಿದ್ದಾರೆ.
ಬಿ.ಐ.ಇ.ಟಿ. ಕಾಲೇಜಿನಲ್ಲಿ ಆಯೋಜಿಸ ಲಾಗಿದ್ದ ಹೊಸ ಶಿಕ್ಷಣ ನೀತಿ – ಪರಿಕಲ್ಪನೆ ಮತ್ತು ಸವಾಲುಗಳು ಎಂಬ ವಿಷಯ ಕುರಿತು ಕಾಲೇಜು ಶಿಕ್ಷಕರಿಗೆ ಆಯೋಜಿಸಿದ್ದ ಉಪ ನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.
ಮೂರು ಶತಮಾನಗಳ ಹಿಂದಿನವರೆಗೂ ಭಾರತದ ತಂತ್ರಜ್ಞಾನ ಅಮೆರಿಕಗಿಂತ ಮುಂದಿತ್ತು. ಆದರೆ, ಬ್ರಿಟಿಷರು ಜಾರಿಗೆ ತಂದ ಶಿಕ್ಷಣ ಪದ್ಧತಿ ಹಾಗೂ ಬಿಳಿಯರ ಕುರಿತು ಭಾರತೀಯರು ಹೊಂದಿದ ಕೀಳರಿಮೆಯಿಂದ ಪರಿಸ್ಥಿತಿ ಬದಲಾಯಿತು ಎಂದವರು ಹೇಳಿದರು.
ಸಮಾಜದ ಸಮಸ್ಯೆ ಒರೆಗೆ : ಚಿಂತನಾ ಕೌಶಲ್ಯಕ್ಕೆ ವಿದೇಶಿ ಶಿಕ್ಷಣದಲ್ಲಿ ಅತಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದರೆ, ಭಾರತದಲ್ಲಿ ಚಿಂತನಾ ಕೌಶಲ್ಯ ಅತಿ ಕಡೆಗಣಸಲ್ಪಟ್ಟಿದೆ ಎಂದ ಅವರು, ಪಠ್ಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವು ದಕ್ಕಿಂತ ಸಮಾಜದಲ್ಲಿನ ಸಮಸ್ಯೆ ಬಗೆಹರಿ ಸುವ ವಿದ್ಯಾರ್ಥಿಯ ಸಾಮರ್ಥ್ಯವನ್ನು ಒaರೆಗೆ ಹಚ್ಚಬೇಕಿದೆ ಎಂದರು.
ಕೊರೊನಾದಿಂದ ಉನ್ನತ ಶಿಕ್ಷಣಕ್ಕೆ ಉತ್ತೇಜನ
ನೂತನ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಹೆಚ್ಚಿಸಬೇಕು ಎಂಬ ಉದ್ದೇಶವಿದ್ದು, 2035ರ ವೇಳೆಗೆ ಶೇ.50ರಷ್ಟು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ತರುವ ಗುರಿ ಇದೆ. ಆದರೆ, ಕೊರೊನಾ ಕಾರಣದಿಂದಾಗಿ ಈ ಗುರಿಯನ್ನು 2030ರಲ್ಲೇ ತಲುಪಬಹುದಾಗಿದೆ ಎಂದು ಡಾ. ಸುಬ್ರಹ್ಮಣ್ಯ ಹೇಳಿದ್ದಾರೆ.
ಕೊರೊನಾದಿಂದಾಗಿ ಆನ್ಲೈನ್ ಮೂಲಕ ನೀಡಲಾಗುವ ಶಿಕ್ಷಣ ನಿರೀಕ್ಷೆಗಿಂತ ಮೊದಲೇ ಬಂದಿದೆ. ಇದು ಉನ್ನತ ಶಿಕ್ಷಣಕ್ಕೆ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಯಾಗಲಿದೆ ಎಂದವರು ತಿಳಿಸಿದರು.
ಛಿದ್ರ ವ್ಯವಸ್ಥೆ : ಪ್ರಸಕ್ತ ಶಿಕ್ಷಣ ವ್ಯವಸ್ಥೆ ಛಿದ್ರವಾಗಿದೆ. ಒಂದೇ ಊರಿನಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜುಗಳಿವೆ. ಆದರೆ, ಅವುಗಳ ನಡುವೆ ಸಂಪರ್ಕವೇ ಇರುವುದಿಲ್ಲ. ಒಂದೇ ಕಾಲೇಜಿನ ಹಲವು ವಿಭಾಗಗಳ ಉಪನ್ಯಾಸಕರು ಕುಳಿತು ಚರ್ಚಿಸದ ಪರಿಸ್ಥಿತಿ ಇದೆ. ನೂತನ ಶಿಕ್ಷಣ ಪದ್ಧತಿಯಲ್ಲಿ ಈ ಪರಿಸ್ಥಿತಿ ಬದಲಾಗಲಿದೆ ಎಂದರು.
ಶಿಕ್ಷಕರಿಂದ ಯಶಸ್ಸು : ನೂತನ ಶಿಕ್ಷಣ ಪದ್ಧತಿಯಿಂದ ಪಠ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಯಾವುದು ಕಲಿಸಬೇಕು ಎಂಬುದು ಹಿಂದಿನಂತೆ ಇರಲಿದೆ. ಆದರೆ, ಯಾವ ರೀತಿ ಕಲಿಸಬೇಕು ಎಂಬುದಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಶಿಕ್ಷಣ ವ್ಯವಸ್ಥೆ ಯಶಸ್ಸು ಶಿಕ್ಷಕರನ್ನೇ ಅವಲಂಬಿಸಿದೆ ಎಂದು ಸುಬ್ರಹ್ಮಣ್ಯ ಹೇಳಿದರು.
ನಿಯಂತ್ರಣ ಕಡಿಮೆ : ಶಿಕ್ಷಣದಲ್ಲಿ ಇದುವರೆಗೆ ಅತಿಯಾದ ನಿಯಂತ್ರಣ ಇದ್ದರೆ, ಹೊಣೆಗಾರಿಕೆ ಕಡಿಮೆ ಇತ್ತು. ನೂತನ ಪದ್ಧತಿಯಲ್ಲಿ ನಿಯಂತ್ರಣವನ್ನು ಕೆಲವೇ ವಿಷಯಗಳಿಗೆ ಸೀಮಿತ ಮಾಡಿದ್ದಾರೆ. ಆದರೆ, ಹೊಣೆಗಾರಿಕೆಯನ್ನು ಹೆಚ್ಚಿಸಿದ್ದಾರೆ. ಕಾಲೇಜುಗಳು ಸೌಲಭ್ಯಗಳ ನೀಡುವ ಮಾಹಿತಿಯನ್ನು ಸತ್ಯ ಎಂದು ಸ್ವೀಕರಿಸಲಾಗುತ್ತದೆ. ಆದರೆ, ಲೋಪ ಕಂಡು ಬಂದರೆ ಕಠಿಣ ಕ್ರಮಕ್ಕೆ ಅವಕಾಶವಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ, ಬಿ.ಐ.ಇ.ಟಿ. ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ ಮತ್ತಿತರರು ಉಪಸ್ಥಿತರಿದ್ದರು.