ಮಲೇಬೆನ್ನೂರು, ಫೆ. 12- ಹಾಲಿವಾಣ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಕೊಮಾರನಹಳ್ಳಿಯ ಐ.ಪಿ. ರಂಗನಾಥ್ ಮತ್ತು ಉಪಾಧ್ಯಕ್ಷರಾಗಿ ಹಾಲಿವಾಣದ ಶ್ರೀಮತಿ ಅಂಜಿತಾ ಸಂತೋಷ್ಕುಮಾರ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐರಣಿ ಪುಟ್ಟಪ್ಪನವರ ಮಗ ಐ.ಪಿ. ರಂಗನಾಥ್ 9 ಮತಗಳನ್ನು ಪಡೆದು ಆಯ್ಕೆಯಾದರೆ, ಹಾಲಿವಾಣದ ಶ್ರೀಮತಿ ಲಕ್ಷ್ಮೀದೇವಿ ಎಸ್.ಜಿ. ಮಂಜುನಾಥ್ ಅವರು 7 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಅಂಜಿತಾ ಸಂತೋಷ್ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಬಿಸಿಎಂ ಎ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿತ್ತು. ತಾ.ಪಂ. ಇ.ಓ. ಗಂಗಾಧರಪ್ಪ ಚುನಾವಣಾಧಿಕಾರಿಯಾಗಿದ್ದರು.
ಪಿಡಿಓ ಕೆ.ಎಸ್. ರಮೇಶ್ ಹಾಜರಿದ್ದರು. ಚುನಾವಣೆ ನಂತರ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮಾಜಿ ಸದಸ್ಯ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಜಿ.ಕೆ. ಮಲ್ಲೇಶಪ್ಪ, ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್ ಸೇರಿದಂತೆ ಇನ್ನೂ ಅನೇಕರು ಅಭಿನಂದಿಸಿದರು.
`ಕೈ’ಗೆ ಕೈಕೊಟ್ಟ ಸದಸ್ಯರು : ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ ಪಟೇಲ್, ಎಸ್. ರಂಗಪ್ಪ ಅವರ ನೇತೃತ್ವದ ಕಾಂಗ್ರೆಸ್ ಗುಂಪಿನಲ್ಲಿ 11 ಜನ ಸದಸ್ಯರು ಗುರುತಿಸಿಕೊಂಡಿದ್ದರು.
5 ಜನ ಸದಸ್ಯರು ಬಿಜೆಪಿ ಗುಂಪಿನಲ್ಲಿದ್ದರು. ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದ 11 ಜನರ ಪೈಕಿ 4 ಜನರು ಬಿಜೆಪಿ ಗುಂಪಿನ ಐ.ಪಿ. ರಂಗನಾಥ್ಗೆ ಮತ ಹಾಕುವ ಮೂಲಕ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದರು.
ಇದರಿಂದ ಕಾಂಗ್ರೆಸ್ ಗುಂಪಿನ ಲಕ್ಷ್ಮಿದೇವಿ ಮಂಜು ನಾಥ್ ಅವರಿಗೆ 7 ಮತಗಳು ಮಾತ್ರ ಲಭಿಸಿದವು. ಬಿಜೆಪಿ ಗುಂಪಿನವರು ಸದ್ದಿಲ್ಲದೆ ಕಾಂಗ್ರೆಸ್ ಗುಂಪಿನ 4 ಜನ ಸದಸ್ಯರನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಹುಮತದ ಗುಂಗಿನಲ್ಲಿದ್ದ ಕಾಂಗ್ರೆಸ್ ಗುಂಪಿನವರಿಗೆ ಅತಿಯಾದ ನಂಬಿಕೆಯೇ ಮುಳುವಾಯಿತೆಂದು ಹೇಳಲಾಗಿದೆ.