ಮಲೇಬೆನ್ನೂರು, ಫೆ. 10 – ಜಿಗಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಶ್ರೀಮತಿ ಕರಿಯಮ್ಮ ಚಂದ್ರಶೇಖರ್ ಮತ್ತು ಉಪಾಧ್ಯಕ್ಷರಾಗಿ ಜಿ. ಬೇವಿನಹಳ್ಳಿಯ ಹೆಚ್. ಆನಂದಗೌಡ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕರಿಯಮ್ಮ 11 ಮತಗಳನ್ನು ಪಡೆದು ಆಯ್ಕೆಯಾದರೆ, ಜಿ.ಬೇವಿನಹಳ್ಳಿ ಜಯಮ್ಮ ಬಿ.ಕೆ. ರಂಗನಾಥ್ 7 ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆನಂದಗೌಡ 10 ಮತಗಳನ್ನು ಪಡೆದು ಆಯ್ಕೆಯಾದರೆ, ಜಿಗಳಿಯ ಎನ್.ಎಂ. ಪಾಟೀಲ್ 7 ಮತಗಳನ್ನು ಪಡೆದು ಪರಾಭವಗೊಂಡರು. ಇಲ್ಲಿ ಒಂದು ಮತ ತಿರಸ್ಕೃತಗೊಂಡಿತು. ಒಟ್ಟು 18 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ತೋಟಗಾರಿಕೆ ಇಲಾಖೆಯ ರೇಖಾ ಅವರು ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ದಾಸರ ರವಿ, ಕಾರ್ಯದರ್ಶಿ ಶೇಖರ್‌ನಾಯ್ಕ, ಬಿಲ್‌ಕಲೆಕ್ಟರ್ ಬಿ. ಮೌನೇಶ್ ಮತ್ತಿತರರು ಹಾಜರಿದ್ದರು.