ಲಾಟರಿ ಮೂಲಕ ಒಲಿದ ಪಟ್ಟ
ಹರಪನಹಳ್ಳಿ, ಫೆ.10- ತಾಲ್ಲೂಕಿನ ಹಲುವಾಗಲು ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಬುಧವಾರ ಲಾಟರಿ ಪ್ರಕ್ರಿಯೆ ನಡೆದು ದ್ಯಾಮಪ್ಪ ಅವರಿಗೆ ಅಧ್ಯಕ್ಷ ಪಟ್ಟ ಒಲಿಯಿತು.
ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ರುದ್ರಪ್ಪ ಮತ್ತು ದ್ಯಾಮಪ್ಪ ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆಯಲ್ಲಿ ತಲಾ 13 ಮತಗಳು ಪಡೆದು, ಸಮಬಲ ಸಾಧಿಸಿದರು.
ಇದರಿಂದ ಚುನಾವಣೆ ಅಧಿಕಾರಿಗಳು ಲಾಟರಿ ಪ್ರಕ್ರಿಯೆ ಅನುಸರಿಸಿದಾಗ ದ್ಯಾಮಪ್ಪ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಇಇ ಸಿದ್ದರಾಜು ಘೋಷಣೆ ಮಾಡಿದರು. ಫೆ.5ರಂದು ನಡೆದ ಆಯ್ಕೆ ಸಭೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹೇಮಾ ಅವರೂ ಲಾಟರಿ ಮೂಲಕವೇ ಜಯ ಸಾಧಿಸಿದ್ದರು. ಅಂದು ಅಧ್ಯಕ್ಷ ಸ್ಥಾನಕ್ಕೆ ಹೆಚ್ಚುವರಿ ನಾಮಪತ್ರಗಳಿದ್ದುದರಿಂದ, ಸದಸ್ಯರ ಒಪ್ಪಿಗೆ ಪಡೆದು ಚುನಾವಣೆ ಮುಂದೂಡಲಾಗಿತ್ತು.
ಮುಂಜಾಗ್ರತೆಯಾಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಡಿಆರ್ ವಾಹನ ಸಮೇತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಆಯ್ಕೆ ಸಭೆಯಲ್ಲಿ ತಹಶೀಲ್ದಾರ್ ಎಲ್.ಎಂ.ನಂದೀಶ್, ಅರವಿಂದ, ಜಿ.ಎಲ್.ಲೋಕೇಶ್, ಬಿ.ನರಸಿಂಹ, ಸಿಪಿಐ ಕೆ.ಕುಮಾರ್, ಪಿಎಸ್‍ಐಗಳಾದ ಪ್ರಶಾಂತ್, ಪ್ರಕಾಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಟಾಕಿ ಸಿಡಿಸಿ ಸಂಭ್ರಮ : ಲಾಟರಿ ಪ್ರಕ್ರಿಯೆ ಮೂಲಕ ಅಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆಯೇ ಗ್ರಾಮದ ಪ್ರಮುಖ ಬೀದಿ, ಊರಮ್ಮ ದೇವಸ್ಥಾನ, ಆಂಜನೇಯ ದೇವಸ್ಥಾನದ ಆವರಣಗಳಲ್ಲಿ ಪಟಾಕಿ ಹಚ್ಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ನೂತನ ಅಧ್ಯಕ್ಷ ದ್ಯಾಮಪ್ಪ ಮಾತನಾಡಿ, ಕೊನೆಗೂ ನ್ಯಾಯ ದೊರೆತಿದೆ. ಸದಸ್ಯನಾಗಿ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ, ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ಪ್ರಾಮಾಣಿಕವಾಗಿ ಜನಸೇವೆ ಮಾಡುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷರನ್ನು ಮುಖಂಡ ಕಲ್ಲೇರ ಬಸವ ರಾಜ್, ಎಚ್.ಟಿ.ಗಿರೀಶಪ್ಪ, ಅರಸನಾಳು ಜಿ.ಬಸವ ರಾಜ್, ಹರಿಜನ ಅಜ್ಜಪ್ಪ, ಇಂದ್ರಪ್ಪ, ಪರಶುರಾಮ್, ಜಿ.ಕೆ.ನಾಗೇಂದ್ರಪ್ಪ, ದಿವಾಕರ್ ಅಭಿನಂದಿಸಿದರು.