ರಾಜನಹಳ್ಳಿಯಲ್ಲಿ ಫೆ. 8 ರಂದು ವಾಲ್ಮೀಕಿ ಜಾತ್ರೆ

ರಾಜನಹಳ್ಳಿಯಲ್ಲಿ ಫೆ. 8 ರಂದು ವಾಲ್ಮೀಕಿ ಜಾತ್ರೆ - Janathavani

ದಾವಣಗೆರೆ, ಜ.30- ಹರಿಹರ ತಾಲ್ಲೂಕು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಬರುವ ಫೆಬ್ರವರಿ 8 ಮತ್ತು 9 ಎರಡು ದಿನಗಳ ಕಾಲ 3ನೇ ವರ್ಷದ ವಾಲ್ಮೀಕಿ ಜಾತ್ರೆ ನಡೆಯಲಿದೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್‌ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಾಲ್ಮೀಕಿ ಜಾತ್ರೆ ಪ್ರಯುಕ್ತ ಫೆಬ್ರವರಿ 8 ರಂದು ಬೆಳಿಗ್ಗೆ 10 ಗಂಟೆಗೆ `ಸರ್ವಧರ್ಮ-ಸಾಮೂಹಿಕ ವಿವಾಹ’ಗಳನ್ನು ಏರ್ಪಡಿಸಲಾಗಿದ್ದು, ವಿವಾಹವಾಗಲಿಚ್ಛಿಸುವ ವಧು-ವರರು ಫೆ. 6 ರೊಳಗಾಗಿ ಶ್ರೀ ಮಠದ ಕಾರ್ಯಾಲಯದಲ್ಲಿ  ಹೆಸರು ನೋಂದಾಯಿಸುವಂತೆ ಕೋರಿದರು.

ವಿವಾಹ ಮಹೋತ್ಸವಕ್ಕೂ ಮುನ್ನ ಅಂದು ಬೆಳಿಗ್ಗೆ 8 ಕ್ಕೆ ಧ್ವಜಾರೋಹಣ, 8.30 ಕ್ಕೆ ರಾಜನ ಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಭಾವ ಚಿತ್ರದ ಮೆರವಣಿಗೆ ಕೂಡ ನಡೆಯಲಿದೆ ಎಂದರು.

ಮಧ್ಯಾಹ್ನ 12 ಗಂಟೆಗೆ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶ ನಡೆಯಲಿದ್ದು, ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವಾಲ್ಮೀಕಿ ನಾಯಕ ನೌಕರರ ಸಮಾವೇಶ, ಸಂಜೆ 5 ಕ್ಕೆ ಸಮಾಜದ ಹೋರಾಟಗಾರರ ಗುರಿಯ ಬಗ್ಗೆ ಚಿಂತನ-ಮಂಥನ, 7 ಗಂಟೆಗೆ ಜಿ.ಪಂ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಅವರ ಉಸ್ತುವಾರಿಯಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ 11 ರಾಜ್ಯಗಳ ಕಲಾವಿದರಿಂದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ರಾತ್ರಿ 11 ಗಂಟೆಗೆ `ಸಂಪೂರ್ಣ ರಾಮಾಯಣ’ ನಾಟಕವನ್ನು ಹಾಸನದ ಕಲಾವಿದರು ಅಭಿನಯಿಸಲಿದ್ದಾ ರೆಂದು ರಮೇಶ್‌ ವಿವರಿಸಿದರು.

ಫೆ. 9 ರಂದು ಬೆಳಿಗ್ಗೆ ಡಾ. ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದರು.

ವಾಲ್ಮೀಕಿ ಜಾತ್ರಾ ಸಮಾವೇಶ : ಫೆ. 9 ರಂದು ಮಧ್ಯಾಹ್ನ 12 ಗಂಟೆಗೆ ವಾಲ್ಮೀಕಿ ಜಾತ್ರಾ ಸಮಾವೇಶವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸುವರು. ಜಾತ್ರಾ ಸಮಿತಿ ಅಧ್ಯಕ್ಷರೂ, ಸಚಿವರೂ ಆದ ರಮೇಶ್‌ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥ್ ನಾರಾಯಣ, ಸಚಿವರಾದ ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಮಾಜಿ ಸಚಿವರಾದ ಎಂ.ಬಿ. ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್‌, ಮಾಜಿ ಶಾಸಕ ಮಧು ಬಂಗಾರಪ್ಪ, ಹೆಚ್‌.ಎಂ. ರೇವಣ್ಣ, ಚಿತ್ರ ನಟರಾದ ಸುದೀಪ್‌, ಶಶಿಕುಮಾರ್‌ ಆಗಮಿಸಲಿದ್ದಾರೆ.

ಹಂದರ ಕಂಬ ಪೂಜೆ : ಫೆ. 1 ರ ಸೋಮವಾರ ಬೆಳಿಗ್ಗೆ 10.30 ಕ್ಕೆ ವಾಲ್ಮೀಕಿ ಪ್ರಸನ್ನಾನಂದ ಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ಮಹಾಮಂಟಪದ ಹಂದರ ಕಂಬ ಪೂಜೆ ನೆರವೇರಲಿದೆ.

ಸಮಿತಿ ಅಧ್ಯಕ್ಷ ರಮೇಶ್‌ ಜಾರಕಿಹೊಳಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.

`ವಾಲ್ಮೀಕಿ ವಿಜಯ’ : ಡಾ. ಎ.ಬಿ. ರಾಮ ಚಂದ್ರಪ್ಪ ಅವರ ಸಂಪಾದಕತ್ವದ ಮೌಲ್ವಿಕ ಕೃತಿ `ವಾಲ್ಮೀಕಿ ವಿಜಯ’ ಬಿಡುಗಡೆಗೊಳ್ಳಲಿದೆ.

`ವಾಲ್ಮೀಕಿ ವಿಜಯ’ ಕೃತಿಯ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌. ಲೋಕೇಶ್ವರ್‌, ವಾಲ್ಮೀಕಿ ಸಮಾಜದ  ಶ್ರೀನಿವಾಸ್‌ ದಾಸಕರಿಯಪ್ಪ, ವಿನಾಯಕ, ರಾಘು ದೊಡ್ಡಮನಿ, ಪತ್ರಕರ್ತ ಜಿಗಳಿ ಪ್ರಕಾಶ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!