ದಾವಣಗೆರೆ,ಜ.25- ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗಳೂರಿನ ಹಿರಿಯ ಸಹಕಾರಿ ಧುರೀಣ ಜೆ.ಎಸ್. ವೇಣುಗೋಪಾಲ ರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಅಧ್ಯಕ್ಷರಾಗಿದ್ದ ಜೆ.ಆರ್. ಷಣ್ಮುಖಪ್ಪ ಅವರು ನೀಡಿದ್ದ ರಾಜೀನಾಮೆ ಯಿಂದಾಗಿ ತೆರವಾದ ಸ್ಥಾನಕ್ಕೆ ನಗರದ ಡಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕಿನ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಚಿತ್ರದುರ್ಗ ಮತ್ತು ದಾವಣಗೆರೆ ಅವಿಭಜಿತ ಜಿಲ್ಲೆಯ ಸಿಡಿಸಿಸಿ ಬ್ಯಾಂಕ್ ಒಂದು ಅವಧಿಗೆ ನಿರ್ದೇಶಕರಾಗಿದ್ದ ವೇಣುಗೋಪಾಲ ರೆಡ್ಡಿ ಅವರು, ದಾವಣಗೆರೆ ನೂತನ ಜಿಲ್ಲೆ ರಚನೆ ನಂತರ 2002 ರಲ್ಲಿ ಸ್ಥಾಪನೆಗೊಂಡ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ ಆರಂಭದಿಂದಲೂ ನಿರ್ದೇಶಕರಾಗಿದ್ದಾರೆ. ಈ ಬ್ಯಾಂಕಿನಲ್ಲಿ ಒಟ್ಟು ಮೂರು ಬಾರಿ ನಿರ್ದೇಶಕರಾಗಿರುವ ಅವರು, 2009ರಲ್ಲಿ ಅಧ್ಯಕ್ಷರೂ ಆಗಿದ್ದರು. ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ನಿರ್ದೇಶಕ ಕೆಂಗಲಹಳ್ಳಿ ಕೆ.ಹೆಚ್.ಷಣ್ಮುಖಪ್ಪ ಅವರು ವೇಣುಗೋಪಾಲ ರೆಡ್ಡಿ ಅವರ ಹೆಸರನ್ನು ಸೂಚಿಸಿದಾಗ, ಅದನ್ನು ಮತ್ತೋರ್ವ ನಿರ್ದೇಶಕ ಜಗದೀಶಪ್ಪ ಬಣಕಾರ್ ಅನುಮೋದಿಸಿದರು.
ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕುಮಾರಸ್ವಾಮಿ ಚುನಾವಣಾಧಿಕಾರಿಯಾಗಿದ್ದರು.
ಬಿಜೆಪಿ ಸೇರಿದ ತಕ್ಷಣ ಒಲಿದ ಅಧಿಕಾರ : ಜಗಳೂರು ತಾಲ್ಲೂಕಿನ ಕಾಂಗ್ರೆಸ್ ಮುಖಂಡರಾಗಿದ್ದ ವೇಣುಗೋಪಾಲ ರೆಡ್ಡಿ ಅವರು ಶಾಸಕ ಎಸ್.ವಿ. ರಾಮಚಂದ್ರ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ ಅವರುಗಳ ನೇತೃತ್ವದಲ್ಲಿ ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಬಿಜೆಪಿ ಸೇರಿದ ತಕ್ಷಣವೇ ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಅಲ್ಲದೇ, ಹಿಂದುಳಿದ ಜಗಳೂರು ತಾಲ್ಲೂಕಿನವರಿಗೆ ಅಧ್ಯಕ್ಷ ಸ್ಥಾನ ದೊರೆತಂತಾಗಿದೆ ಎಂದು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.