ದಾವಣಗೆರೆ,ಜ.16- ದಾವಣಗೆರೆ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಡಿ.ಪಿ. ಬಸವರಾಜ್ ಅವರು ಇಂದು ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯುವುದರ ಮೂಲಕ ಜಯ ಗಳಿಸಿದ್ದು, ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಮತ್ತೋರ್ವ ಹಿರಿಯ ನ್ಯಾಯವಾದಿ ಪಂಚಪ್ಪ ಯಲ್ಲಪ್ಪ ಹಾದಿಮನಿ ಅವರಿಗಿಂತ 60 ಮತಗಳನ್ನು ಹೆಚ್ಚು ಪಡೆದು ಡಿ.ಪಿ.ಬಸವರಾಜ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಡಿ.ಪಿ. ಬಸವರಾಜ್ 289 ಮತಗಳನ್ನು ಗಳಿಸಿದರೆ, ಹಾದಿಮನಿ 229 ಮತಗಳನ್ನು ಪಡೆದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಐವರಲ್ಲಿ ತಿಮ್ಮಲಾಪುರದ ರವಿಶಂಕರ್ 221 ಮತಗಳನ್ನು ಪಡೆದು, ಮತ ಗಳಿಕೆಯಲ್ಲಿ ತೃತೀಯ ಸ್ಥಾನ ಪಡೆದರು. ಸಂಘದ ಮಾಜಿ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ 116 ಮತಗಳನ್ನು ಪಡೆದರೆ, ಸಂಘದ ಮತ್ತೋರ್ವ ಮಾಜಿ ಅಧ್ಯಕ್ಷ ವಿ. ತಿಮ್ಮೇಶ್ ಕೇವಲ 12 ಮತಗಳಿಗೆ ತೃಪ್ತಿಪಟ್ಟುಕೊಂಡರು.
ಉಪಾಧ್ಯಕ್ಷರಾಗಿ ಬಿ.ಬಿ. ರಾಮಪ್ಪ ಅವರು 77 ಮತಗಳ ಅಂತರದಿಂದ ಚುನಾಯಿತಗೊಂಡಿದ್ದಾರೆ. ರಾಮಪ್ಪ 249 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಜಿ.ಎಸ್. ರಂಗನಾಥ್ 172 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೂ ಐವರು ಸ್ಪರ್ಧಿಸಿದ್ದರು. ಬಿ.ಜಿ. ಚಂದ್ರಶೇಖರ್ (169), ಶ್ರೀಮತಿ ಅಮೀರಾ ಬಾನು (136), ಕೆ.ಸಿ. ರೇವಣಸಿದ್ದಪ್ಪ (125) ಪರಾಭವಗೊಂಡಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಇಬ್ಬರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿತ್ತು. ಎಲ್. ಹೆಚ್. ಪ್ರದೀಪ್ ಲೋಕಿಕೆರೆ (634) ಮತಗಳನ್ನು ಪಡೆದು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಎಸ್. ಮಂಜು (234) ಮತಗಳನ್ನು ಪಡೆದರು.
ಸಹ ಕಾರ್ಯದರ್ಶಿ ಸ್ಥಾನಕ್ಕೂ ಇಬ್ಬರ ನಡುವೆ ಸ್ಪರ್ಧೆ ನಡೆದಿತ್ತು. ಜಿ.ಕೆ. ಬಸವರಾಜ್ 578 ಮತಗಳನ್ನು ಗಳಿಸಿ ಸಹ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಎ.ಎಸ್. ಮಂಜುನಾಥ್ (267) ಮತಗಳನ್ನು ಪಡೆದು ಪರಾಭವಗೊಂಡರು.
ಕಾರ್ಯಕಾರಿ ಸಮಿತಿಯ 8 ಸ್ಥಾನಗಳಿಗೆ 9 ಜನರು ಸ್ಪರ್ಧಿಸಿದ್ದರು. ಈ ಪೈಕಿ ಬಿ. ಖಲೀಲ್ ಕೇವಲ 431 ಮತಗಳಿಗೆ ತೃಪ್ತಿಪಟ್ಟುಕೊಳ್ಳುವುದರ ಮೂಲಕ ಪರಾಭವಗೊಂಡರು.
ಅಣ್ಣಪ್ಪ (708), ಬಿ.ವಿಶ್ವನಾಥ್ (703), ಚಂದ್ರಶೇಖರ ಪಟ್ಟಣಶೆಟ್ಟಿ (689), ಬಿ. ಚಂದ್ರಪ್ಪ (670), ಎನ್.ಸಿದ್ದೇಶಿ (619), ಚಂದ್ರಶೇಖರ್ ಜಿ. ರಾಥೋಡ್ (579), ಕೆ.ಎಸ್. ಸಂತೋಷ್ ನಾಯ್ಕ್ (577) ಮತ್ತು ಎ.ಹೆಚ್. ಕಿರಣ್ (575) ಅವರುಗಳು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಮಹಿಳಾ ಮೀಸಲು ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಶ್ರೀಮತಿ ಕೆ. ಮಂಜುಳಾ ಅತ್ಯಧಿಕ 489 ಮತಗಳನ್ನು ಪಡೆದು ಆಯ್ಕೆಯಾದರೆ, ಶ್ರೀಮತಿ ಆರ್. ಭಾರತಿ 301 ಮತಗಳೊಂದಿಗೆ ಪರಾಭವಗೊಂಡರು.
ವಕೀಲರ ಸಂಘದಲ್ಲಿರುವ ಅರ್ಹ 1063 ಮತದಾರರಲ್ಲಿ 871 ಮತಗಳು ಚಲಾವಣೆಗೊಂಡು, ಶೇ. 81.9 ರಷ್ಟು ಮತದಾನ ನಡೆದಿತ್ತು. ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ವಕೀಲರ ಸಂಘದ ಭವನದಲ್ಲಿ ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಮತದಾನವು ಶಾಂತಿಯುತವಾಗಿತ್ತು. ನಂತರ ಆರಂಭಗೊಂಡ ಮತಗಳ ಎಣಿಕೆ ಕಾರ್ಯವು ರಾತ್ರಿ 10ರ ವೇಳೆಗೆ ಮುಗಿದು, ಫಲಿತಾಂಶ ಪ್ರಕಟಗೊಂಡಿತು.
ಹಿರಿಯ ನ್ಯಾಯವಾದಿಯೂ ಆಗಿರುವ ಮುಖ್ಯ ಚುನಾವಣಾಧಿಕಾರಿ ಎಲ್. ದಯಾನಂದ್ ಅವರು ಫಲಿತಾಂಶವನ್ನು ಪ್ರಕಟಿಸಿದರು. ನ್ಯಾಯವಾದಿಗಳಾದ ಡಿ.ಹೆಚ್. ರಾಜು, ಹರ್ಷದ್, ಹೆಚ್.ಶಿವಣ್ಣ ಅವರುಗಳೂ ಸಹ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.