ಸಹಕಾರ ಬ್ಯಾಂಕು ಮಹಾಮಂಡಳದ ನಿರ್ದೇಶಕರಾಗಿ ಕೋಗುಂಡಿ ಬಕ್ಕೇಶಪ್ಪ

ಸಹಕಾರ ಬ್ಯಾಂಕು ಮಹಾಮಂಡಳದ ನಿರ್ದೇಶಕರಾಗಿ ಕೋಗುಂಡಿ ಬಕ್ಕೇಶಪ್ಪ - Janathavaniಬೆಂಗಳೂರು, ಜ. 12 – ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾ ಮಂಡಳದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವರೂ ಆಗಿರುವ ರಾಜ್ಯದ ಹಿರಿಯ ಸಹಕಾರಿ ಧುರೀಣ ಹೆಚ್.ಕೆ. ಪಾಟೀಲ್ ನೇತೃತ್ವದಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೆಚ್.ಕೆ. ಪಾಟೀಲ್ ಅವರ ನೇತೃತ್ವದ ಗುಂಪಿನಲ್ಲಿದ್ದವರ ಪೈಕಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರೂ ಅವಿರೋಧವಾಗಿ ಚುನಾಯಿತರಾಗಿದ್ದಾರೆ.

ಮುಂದಿನ 5 ವರ್ಷಗಳ ಅವಧಿಗೆ ಇದೇ ದಿನಾಂಕ 17ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಮಹಾಮಂಡಳದ ಹಾಲಿ ಅಧ್ಯಕ್ಷರೂ ಆಗಿರುವ ಹೆಚ್.ಕೆ. ಪಾಟೀಲ್ ಅವರಲ್ಲದೇ, ಆಡಳಿತ ಮಂಡಳಿಯ ಎಲ್ಲಾ 18 ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದೆ ಎಂದು ಘೋಷಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಸಹಕಾರ ಪಟ್ಟಣ ಬ್ಯಾಂಕುಗಳಿಗೆ ಕ್ಷೇಮಾಭಿವೃದ್ಧಿಯ ಪ್ರಾತಿನಿಧಿಕ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಆಡಳಿತ ಮಂಡಳಿಯಲ್ಲಿ 2-3 ಜಿಲ್ಲೆಗೊಬ್ಬರಂತೆ ನಿರ್ದೇಶಕರಿದ್ದಾರೆ. 

ಈ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಒಟ್ಟು 14 ವರ್ಗಗಳ ಪೈಕಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಿರುವ `ಹೆಚ್’ ಗುಂಪಿನಿಂದ ಏಕೈಕ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೋಗುಂಡಿ ಬಕ್ಕೇಶಪ್ಪ ಅವರ ಆಯ್ಕೆ ಮೊದಲ ಹಂತದಲ್ಲೇ ಅವಿರೋಧವಾಗಿ ನಡೆಯಿತು.

ಈ ಮಹಾಮಂಡಳದ ಅಧ್ಯಕ್ಷರಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೆಚ್.ಕೆ. ಪಾಟೀಲ್ ಅವರು ಇದೀಗ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದು, ಅವರೊಂದಿಗೆ ಕೋಗುಂಡಿ ಬಕ್ಕೇಶಪ್ಪ ಅವರು ಸತತ ಎರಡನೇ ಬಾರಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತ (ಆಡಳಿತ -1) ಡಾ. ಬಿ.ಆರ್. ಹರೀಶ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವನ್ನು ಸುಮಾರು 5 ದಶಕಗಳ ಹಿಂದೆ ಅಂದಿನ ಸಹಕಾರಿ ಧುರೀಣರಾಗಿದ್ದ ಎಸ್. ಕೊಟ್ರಬಸಪ್ಪ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಸ್ಥಾಪನೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರದ ದಿನಗಳಲ್ಲಿ ಮಹಾಮಂಡಳದ ಕೇಂದ್ರ ಸ್ಥಾನವು ರಾಜಧಾನಿ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು.  ಇದೀಗ ಈ ಮಹಾಮಂಡಳವು ಕರ್ನಾಟಕದ ಎಲ್ಲಾ ಸಹಕಾರ ಪಟ್ಟಣ ಬ್ಯಾಂಕುಗಳ ಸದಸ್ಯತ್ವ ಹೊಂದಿದ್ದು, ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ. ಬೆಂಗಳೂರು ಮಾತ್ರವಲ್ಲದೇ, ಬೆಳಗಾವಿಯಲ್ಲಿ ಕೋಟ್ಯಾಂತರ ರೂ.ಗಳ ಬೃಹತ್ ವಾಣಿಜ್ಯ ಕಟ್ಟಡಗಳನ್ನು ಹೊಂದಿದೆ. ಇದು ದಾವಣಗೆರೆ ನಗರ – ಜಿಲ್ಲೆಗೆ ಕೀರ್ತಿ ತರುವಂತಾಗಿದೆ.

error: Content is protected !!