ವಕೀಲನ ಮೇಲೆ ಹಲ್ಲೆ : ಮೂವರಿಗೆ ಶಿಕ್ಷೆ

ದಾವಣಗೆರೆ, ಆ. 19 – ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಮೂವರಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜಗಳೂರು ತಾಲ್ಲೂಕು ಜಮ್ಮಾಪುರದ ನಿಂಗಪ್ಪ, ಉಮೇಶ್ ಹಾಗೂ ರುದ್ರಮುನಿ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿರುವ  ನ್ಯಾಯಾಧೀಶರಾದ ಕೆ.ಬಿ. ಗೀತಾ ಅವರು ಜೈಲು ಶಿಕ್ಷೆಯ ಜೊತೆಗೆ ದೋಷಿಗಳಿಗೆ ತಲಾ 48 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ. 

ಜಮ್ಮಾಪುರ ಗ್ರಾಮದ ಆಂಜನೇಯ ದೇವಸ್ಥಾನದ ವಿಚಾರದಲ್ಲಿ ಸಿವಿಲ್ ವ್ಯಾಜ್ಯ ಜಗಳೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇತ್ತು. ಈ ಪ್ರಕರಣದಲ್ಲಿ ಇದೇ ಗ್ರಾಮದ ವಕೀಲ ರಾಜ ರಮೇಶ್‌ಚಂದ್ರ ಭೂಪತಿ ಅವರು ಕಕ್ಷಿದಾರರೊಬ್ಬರ ಪರವಾಗಿ  ಹಾಜರಿದ್ದರು. ಇದಕ್ಕೆ ಆಕ್ಷೇಪಿಸಿದ ಆರೋಪಿಗಳಾದ ನರಸಪ್ಪ, ನಿಂಗಪ್ಪ, ಉಮೇಶ್ ಹಾಗೂ ರುದ್ರಮುನಿ ಅವರು 12.02.2014ರಂದು  ಕಣಗದಿಂದ ತಲೆಗೆ ಹೊಡೆದು ತೀವ್ರ ಸ್ವರೂಪವಾ ಗಾಯಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು.

ಬಿಡಿಸಲು ಬಂದ ಪ್ರಹ್ಲಾದ, ನರಸಿಂಹಪ್ಪ ಎಂಬುವವರು ಹಾಗೂ ವಕೀಲರ ತಾಯಿ ಶಿವಲಿಂಗಮ್ಮ ಮೇಲೂ ಕಣಗ ಹಾಗೂ ಕಲ್ಲಿನಿಂದ ಗಾಯಗೊಳಿಸಿದ್ದರು. ಈ ಬಗ್ಗೆ ಗಾಯಗೊಂಡ ವಕೀಲ ಭೂಪತಿ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾಲ್ವರ ವಿರುದ್ಧ ಪಿಎಸ್‌ಐ ಬಿ. ಮಲ್ಲಿಕಾರ್ಜುನ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ವೇಳೆ ಆರೋಪಿ ನರಸಪ್ಪ ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಎಸ್.ವಿ. ಪಾಟೀಲ್ ಅವರು ವಾದ ಮಂಡಿಸಿದ್ದರು.

error: Content is protected !!