ಹರಿಹರ, ಡಿ.29- ನಗರದ ಮಾಜೇ ನಹಳ್ಳಿ ಗ್ರಾಮ ದೇವತೆ ದೇವಸ್ಥಾನದ ಮುಂಭಾಗದಲ್ಲಿ ಭರಮಂಪುರ ನಿವಾಸಿ ರೇಖಾ ನಾಗರಾಜ್ (28) ಎಂಬ ವಿವಾಹಿತ ಮಹಿಳೆಯನ್ನು ಚೇತನ್ ತಂದೆ ಬೀರಪ್ಪ ಎಂಬಾತ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಮಾತನಾಡಿ, ಇಂದು ಸಂತೆ ದಿನವಾಗಿದ್ದರಿಂದ ರೇಖಾ ತರಕಾರಿ ಮಾರಿಕೊಂಡು ಮನೆಗೆ ತನ್ನ ಮಗನೊಂದಿಗೆ ತೆರಳುತ್ತಿದ್ದಾಗ ದೇವಸ್ಥಾನದ ಮುಂಭಾಗದಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಿದರು.
ರೇಖಾಳನ್ನು ತಡೆದು ನಿಲ್ಲಿಸಿದ 22 ವರ್ಷ ವಯಸ್ಸಿನ ಚೇತನ್, ಆಕೆಯ ಕುತ್ತಿಗೆ, ಕಣ್ಣು, ಕಾಲು ಮತ್ತು ಹೃದಯ ಭಾಗಕ್ಕೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಸ್ಥಳೀಯ ಸಾರ್ವಜನಿಕರು ಕೃತ್ಯವನ್ನು ನೋಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ರೇಖಾ ಮತ್ತು ಚೇತನ್ ಇಬ್ಬರಿಗೂ ಹಲವಾರು ದಿನಗಳಿಂದ ಸ್ನೇಹ ಇದ್ದು, ಕಳೆದ ಆರು ತಿಂಗಳ ಹಿಂದೆ ಒಮ್ಮೆ ಗಲಾಟೆ ಕೂಡ ನಡೆದಿದೆ. ಮೃತಳ ಪತಿ ನಾಗರಾಜ್ ಹೊರಗಡೆ ಹೋಗು ವಾಗ ಚೇತನ್ ನನ್ನು ವಾಹನ ಓಡಿಸಲು ಕರೆದುಕೊಂಡು ಹೋಗುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ರೇಖಾಗೆ ಇಬ್ಬರು ಮಕ್ಕಳಿದ್ದು, ದೊಡ್ಡಿಬೀದಿಯ ಮದ್ದಮ್ಮ ದೇವಸ್ಥಾನದ ಬಳಿ ವಾಸವಾಗಿದ್ದರು. ಪತಿ ನಾಗರಾಜ್ ತರಗಾರ ಕೆಲಸ ಮಾಡುತ್ತಾರೆ ಎನ್ನಲಾಗಿದೆ. ಚೇತನ್‌ನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ಹರಿಹರ ನಗರ ಠಾಣೆಯಲ್ಲಿ ದಾಖಲಿಸಲಾಗಿದೆ.
ಡಿವೈಎಸ್ಪಿ ನರಸಿಂಹ ತಾಮ್ರಧ್ವಜ್, ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಸುನಿಲ್ ಬಸವರಾಜ್ ತೆಲಿ, ಡಿ ರವಿಕುಮಾರ್ ಹಾಗೂ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.