ದಾವಣಗೆರೆ, ಡಿ.23- ಹಣಕ್ಕಾಗಿ ಮದರಸಾದಲ್ಲಿ ಮಲಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಕೊಲೆ ಆರೋಪಿಗಳನ್ನು ಘಟನೆ ನಡೆದ 48 ಗಂಟೆಗಳಲ್ಲೇ ಹೊನ್ನಾಳಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 1 ಲಕ್ಷದ 11 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ 1 ಚಾಕು, 2 ಬೈಕ್ಗಳನ್ನು ಜಪ್ತು ಮಾಡಿದ್ದಾರೆ.
ಅದೇ ಗ್ರಾಮದ ಶೋಯಬ್ ಅಕ್ತರ್ ಅಲಿಯಾಸ್ ಶೇಬು, ಮುಮ್ತಾಕೀಂ ಅಲಿಯಾಸ್ ಮುಂತು, ಮಹಮ್ಮದ್ ಜಿಕ್ರಿಯಾ, ಮುಜಾಮಿಲ್, ಇಕ್ಬಾಲ್ ಬಂಧಿತರು.
ಹೊನ್ನಾಳಿ ತಾಲ್ಲೂಕು ಹುಣಸಘಟ್ಟ ಗ್ರಾಮದ ವಾಸಿ ಎನ್ನಲಾದ ನಜೀರ್ ಅಹಮ್ಮದ್ (50) ಎಂಬಾತ ಗ್ರಾಮದ ಮದರಸಾದಲ್ಲಿ ಪ್ರತೀ ದಿನದಂತೆ ಡಿ.19ರಂದು ರಾತ್ರಿ ಮಲಗಿದ್ದ ವೇಳೆ ಬಂಧಿತ ಆರೋಪಿಗಳು ಹಣಕ್ಕಾಗಿ ಕೊಲೆ ಮಾಡಿದ್ದರು. ಈ ಬಗ್ಗೆ ಡಿ.20ರಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾರ್ಗದರ್ಶನದಲ್ಲಿ ಸಿಪಿಐ ಟಿ.ವಿ.ದೇವರಾಜ ನೇತೃತ್ವದಲ್ಲಿ ಎಸ್ಐ ಬಸವರಾಜ ಬಿರಾದಾರ, ಎಎಸ್ ಐ ಪರಶುರಾಮಪ್ಪ, ಸಿಬ್ಬಂದಿಗಳಾದ ಎಂ. ಫೈರೋಜ್ ಖಾನ್, ವೆಂಕಟರಮಣ, ಹರೀಶ, ಜಗದೀಶ, ಭರತಕುಮಾರ, ಬಸವರಾಜ ಜಂಬೂರ, ಪ್ರಸನ್ನ, ವೆಂಕಟೇಶ, ಜೀಪು ಚಾಲಕರಾದ ರಮೇಶ, ನಾಗರಾಜ ತಂಡ ಕೊಲೆ ಪ್ರಕರಣ ಪತ್ತೆ ಮಾಡಿ ಶೋಯಬ್ ಅಕ್ತರ್, ಮುಮ್ತಾಕೀಂ ಇಬ್ಬರನ್ನೂ ಬಂಧಿಸಿ, ವಿಚಾರಣೆಗೊಳಪಡಿಸಿದಾಗ ನಜೀರ್ ಅಹಮ್ಮದ್ ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ನಂತರ ತನಿಖೆ ಮುಂದುವರೆಸಿದಾಗ ಕೊಲೆ ಪ್ರಕರಣದ ಸಾಕ್ಷಿ ನಾಶ ಮಾಡಿ, ಕೃತ್ಯಕ್ಕೆ ಸಹಕರಿಸಿದ ಇತರೆ ಮೂವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.