ದಾವಣಗೆರೆ, ಡಿ.21- ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ತಮ್ಮ ಇಲಾಖೆಯ ಕಚೇರಿ ಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾದ ಎಂ.ಆರ್. ಶಿವಕುಮಾರ್ (49) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ.
ಮೂಲತಃ ದಾವಣಗೆರೆ ತಾಲ್ಲೂಕಿನ ಮಳಲ್ಕೆರೆ ಗ್ರಾಮದವರಾದ ಶಿವಕುಮಾರ್, ಕಳೆದ ನವೆಂಬರ್ 21ರಿಂದ ಡಿಸೆಂಬರ್ 11ರವರೆಗೆ ರಜೆಯಲ್ಲಿದ್ದರು. ಭಾನುವಾರ ರಜಾ ದಿನವಾಗಿದ್ದರೂ ಮಧ್ಯಾಹ್ನ 12.30ರ ವೇಳೆ ಮನೆಯಿಂದ ಕಚೇರಿಗೆ ಬಂದು ಅಲ್ಲಿನ ಸೀಲಿಂಗ್ ಫ್ಯಾನ್ಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಇಲಾಖೆ ಸಿಬ್ಬಂದಿ ಕಚೇರಿ ಬಾಗಿಲು ತೆಗೆದಾಗ ಶಿವಕುಮಾರ್ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಶಿವಕುಮಾರ್ ಕುಟುಂಬವು ಸಾಮರಸ್ಯದಿಂದ ಇದ್ದು, ಮನೆಯಲ್ಲೂ ಯಾವುದೇ ಸಮಸ್ಯೆ ಇರಲಿಲ್ಲ. ದೊಡ್ಡಬಾತಿ ಗ್ರಾಮದ ತಪೋವನದಲ್ಲಿ ಕಳೆದ ವಾರವಷ್ಟೇ ಮಾನಸಿಕ ಖಿನ್ನತೆ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.