ಸಹೋದರಿಯರ ಪೈಕಿ ಅಪ್ರಾಪ್ತೆಯ ಮದುವೆಗೆ ತಡೆ

ದಾವಣಗೆರೆ, ಡಿ.17- ಅಣ್ಣ-ತಮ್ಮನಿಗೆ ಅದೇ ಗ್ರಾಮದ ಅಕ್ಕ-ತಂಗಿಯರೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದು, ಸಹೋದರಿಯರ ಪೈಕಿ ಓರ್ವ ಅಪ್ರಾಪ್ತೆಯ ಮದುವೆ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ, ಪಿಡಿಓ, ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ, ಹದಡಿ ಪೊಲೀಸರು ಯಶಸ್ವಿಯಾಗಿರುವ ಘಟನೆ ತಾಲ್ಲೂಕಿನ ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. 

ಗ್ರಾಮವೊಂದರ ಅಣ್ಣ, ತಮ್ಮನಿಗೆ ಅದೇ ಗ್ರಾಮದ ಅಕ್ಕ-ತಂಗಿ ಮದುವೆ ಮಾಡಲು ಸಿದ್ಧತೆ ನಡೆದಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ. ಕೊಟ್ರೇಶ್, ಮಕ್ಕಳ ಸಹಾಯವಾಣಿ ಕಾರ್ಯಕರ್ತರಾದ ಟಿ.ಎ. ಹರ್ಷದ್ ಅಲಿ, ಗ್ರಾಮ ಪಂಚಾಯಿತಿ ಪಿಡಿಓ ಲಕ್ಷ್ಮೀದೇವಿ, ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕರಾದ ಮೈತ್ರಾದೇವಿ, ಮೇಲ್ವಿಚಾರಕರಾದ ಸುಮಂಗಲ, ಹದಡಿ ಠಾಣೆ ಎಎಸ್‍ಐ ಚನ್ನವೀರಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹಾಲೇಶ್ ತಂಡವು ಅಪ್ರಾಪ್ತೆಯ ಮನೆಗೆ ತೆರಳಿ ಬಾಲಕಿಯ ತಂದೆ, ತಾಯಿಯನ್ನು ಭೇಟಿ ಮಾಡಿ, ಅಪ್ರಾಪ್ತೆಯ ಶಾಲಾ ದಾಖಲೆಯನ್ನು ಪರಿಶೀಲಿಸಿದಾಗ ಬಾಲಕಿಯ ವಯಸ್ಸು 16 ವರ್ಷ 11 ತಿಂಗಳು ಎಂಬುದಾಗಿ ಕಂಡು ಬಂದಿದೆ. 

ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಮಾಡಿದರೆ 1 ಲಕ್ಷ ರು. ದಂಡ, 1 ವರ್ಷಕ್ಕೆ ಕಡಿಮೆ ಇಲ್ಲದಂತೆ 2 ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಾಗಲಿದೆ ಎಂಬುದಾಗಿ ಪೋಷಕರಿಗೆ ಎಚ್ಚರಿಸಿ ಕಾನೂನಿನ ಬಗ್ಗೆ ಅರಿವು ಮೂಡಿಸಿದರು. ಅಲ್ಲದೇ ಅಪ್ರಾಪ್ತೆಯ ಪಾಲಕರಿಂದ ಮುಚ್ಚಳಿಕೆ ಪತ್ರ ಪಡೆದಿದ್ದಾರೆ.

error: Content is protected !!