ಅಪ್ರಾಪ್ತೆಯ ಅತ್ಯಾಚಾರ : ಕಾರಾಗೃಹ ಶಿಕ್ಷೆ

ದಾವಣಗೆರೆ, ಡಿ.10- ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಿ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ (ಪೋಕ್ಸೋ) ನ್ಯಾಯಾಲಯ ತೀರ್ಪು ನೀಡಿದೆ. 

ಸ್ಥಳೀಯ ಇಮಾಂ ನಗರದ ವಾಸಿ ಸಾಧಿಕ್ ಶಿಕ್ಷೆಗೊಳಗಾದ ಆರೋಪಿ. ಮೇ 19, 2019ರಂದು ಮಧ್ಯಾಹ್ನ 3ರ ವೇಳೆ ಅದೇ ಭಾಗದ ಝಂಡೇ ಕಟ್ಟೆ ಬಳಿ ಆಟವಾಡುತ್ತಿದ್ದ 8 ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ, ಈತನು ಅತ್ಯಾಚಾರವೆಸಗಿದ್ದ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾಧಿಕ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಹಿಳಾ ಠಾಣೆಯ ವೃತ್ತ ನಿರೀಕ್ಷಕಿ ಪ್ರಭಾವತಿ ಶೇತಸನದಿ ಹಾಗೂ ಸಿಬ್ಬಂದಿಗಳು ಆರೋಪಿತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕಲಂ 6 (ಪೋಕ್ಸೋ) 2012 ಹಾಗೂ 376 ಐಪಿಸಿ ಸೆಕ್ಷನ್‍ನಡಿ ಆರೋಪಣಾ ಪಟ್ಟಿ ಸಲ್ಲಿಸಿದ್ದರು. 

ಸುದೀರ್ಘ ವಿಚಾರಣೆ ನಡೆದು ಆರೋಪಿ ಸಾಧಿಕ್ ಅಪರಾಧ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಶೇಷ (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಾಗಶ್ರೀ ಅವರು ಆರೋಪಿತನಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ  ತೀರ್ಪು ನೀಡಿದರು. 

ಸರ್ಕಾರದ ಪರ ವಿಶೇಷ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಎಚ್.ಎಸ್. ಶೌಕತ್ ಅಲಿ ವಾದ ಮಂಡಿಸಿದ್ದರು.

error: Content is protected !!