ದಾವಣಗೆರೆ, ಡಿ.6 – ನಕಲಿ ಬಂಗಾರವನ್ನು ಅಸಲಿ ಎಂದು ನಂಬಿಸಿ ವಂಚಿಸಿ, ಹಲ್ಲೆ ಮಾಡಿ ಹಣ ಹಾಗೂ ಮೊಬೈಲ್ಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿರುವ ಘಟನೆ ತಾಲ್ಲೂಕಿನ ಶಿರಗಾನಹಳ್ಳಿ ಗ್ರಾಮದ ಬಳಿ ನಿನ್ನೆ ಜರುಗಿದೆ.
ಹೊನ್ನಾಳಿ ಪಟ್ಟಣದ ಚಂದ್ರಪ್ಪ ಎಂಬುವವರಿಗೆ ಮೊದಲು ರಾಮಪ್ಪ ಹಾಗೂ ಲಕ್ಷ್ಮಣ ಹಾಗೂ ಇತರರು ಸೊಂಡೂರಿನಲ್ಲಿರುವ ನಮ್ಮ ಸಂಬಂಧಿಕರಿಗೆ ಮನೆ ಅಡಿಪಾಯ ಹಾಕುವಾಗ ಬಂಗಾರ ಸಿಕ್ಕಿದೆ,
ಅವರ ಮಗಳ ಮದುವೆ ಇದ್ದು, ಅವರಿಗೆ ಹಣ ಬೇಕಾಗಿದೆ, ಕಡಿಮೆ ದರಕ್ಕೆ ಬಂಗಾರ ಕೊಡುತ್ತೇವೆ ಎಂದು ಹೇಳಿ ಮೊದಲಿಗೆ ಚಿಕ್ಕ ತುಣುಕು ಅಸಲಿ ಬಂಗಾರವನ್ನು ತೆಲಿಗಿ ಗ್ರಾಮದ ಬಳಿ ಕರೆಸಿ ಕೊಟ್ಟಿದ್ದಾರೆ.
ದೂರುದಾರ ಚಂದ್ರಪ್ಪ ಹೊನ್ನಾಳಿಯಲ್ಲಿ ಬಂಗಾರದ ತುಣುಕನ್ನು ಬಂಗಾರದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅಸಲಿ ಬಂಗಾರ ಎಂದು ಗೊತ್ತಾಗಿದೆ. ಆಗ ಬಹಳಷ್ಟು ಬಂಗಾರ ಖರೀದಿಗೆ ಆರೋಪಿತರು ಹೇಳಿದ ಶಿರಗಾನಹಳ್ಳಿ ಕ್ರಾಸ್ ಬಳಿ 3 -12-2020 ರಂದು ಆಗಮಿಸಿ ಕಾಲು ಕಿಲೋ ಬಂಗಾರಕ್ಕೆ 2.75 ಲಕ್ಷ ರು.ಗಳನ್ನು ತಂದಿದ್ದಾರೆ.
ಶಿರಗಾನಹಳ್ಳಿ ಕ್ರಾಸ್ ಹೊಲದ ಬಳಿ ರಾಮಪ್ಪ ಹಾಗೂ ಲಕ್ಷ್ಮಣ ಎಂಬುವವರು ಹಣ ಕೊಡಿ ಎಂದು ಕೇಳುತ್ತಾರೆ, ಆಗ ಖರೀದಿ ಮಾಡಲು ಆಗಮಿಸಿದ್ದ ಚಂದ್ರಪ್ಪ ಹಾಗು ಇತರರು ಮೊದಲು ಬಂಗಾರ ಕೊಡಿ ಎಂದು ಕೇಳುತ್ತಾರೆ, ಆಗ ಇದ್ದಕ್ಕಿದ್ದ ಹಾಗೆ ಹೊಲದ ಕಡೆಯಿಂದ 5-6 ಜನರು ಚಾಕು, ಕಟ್ಟಿಗೆ ಹಿಡಿದು ಬಂದು ಹಲ್ಲೆ ಮಾಡಿ 2.75 ಲಕ್ಷ ರೂ. ಹಾಗೂ ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಿ ಪರಾರಿಯಾಗಿರುತ್ತಾರೆ ಎಂದು ಹೊನ್ನಾಳಿಯ ಚಂದ್ರಪ್ಪ ಹಲುವಾಗಲು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಹಲುವಾಗಲು ಪೊಲೀಸರು ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿ ರಾವ್ ನೇತೃತ್ವದ ತಂಡವು ಪ್ರಕರಣ ಭೇದಿಸಿ ಹಲ್ಲೆ ಮಾಡಿ ಹಣ ದೋಚಿದ ಆರೋಪಿತರಲೊಬ್ಬ ವಡೇರಹಳ್ಳಿ ಕೊರಚಹಟ್ಟಿಯ ಕೆ.ಎಂ.ಮಂಜಪ್ಪನನ್ನು ಬಂಧಿಸಿ ಆತನಿಂದ 2 ಲಕ್ಷ ರು. ಹಾಗೂ ಚಾಕು ವಶ ಪಡಿಸಿಕೊಂಡಿದ್ದಾರೆ.