ಕಾರ್ಡ್ ನಂಬರ್ ನೀಡಿ ವಂಚನೆಗೊಳಗಾದ ಮಹಿಳೆ
ದಾವಣಗೆರೆ, ನ.27- ಎಟಿಎಂ ಕಾರ್ಡ್ ರಿನಿವಲ್ ಮಾಡುವುದಾಗಿ ನಂಬಿಸಿ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 49 ಸಾವಿರ ರೂ. ಹಣವನ್ನು ಆನ್ಲೈನ್ ಮುಖೇನ ದೋಚಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬಸವನಗರ ವಸಂತ ರಸ್ತೆಯ ಪಿ.ಎಸ್. ಅರ್ಚನ ವಂಚನೆಗೊಳಗಾದವರು. ಗುರುವಾರ ಅರ್ಚನ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದ ಅಪರಿಚಿತನು, ತಾನು ಬ್ಯಾಂಕ್ ಆಧಿಕಾರಿ ಎಂದು ಪರಿಚಯಿಸಿಕೊಂಡು, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗುತ್ತಿದೆ.
ಕಾರ್ಡ್ ಅಪ್ಡೇಟ್ ರಿನಿವಲ್ ಮಾಡಲು ಎಟಿಎಂ ಕಾರ್ಡ್ ನಂಬರ್ ತಿಳಿಸಲು ಹೇಳಿದ್ದು, ಇದನ್ನು ನಂಬಿ ಈಕೆ ತನ್ನ ತಾಯಿಯ ಖಾತೆಯುಳ್ಳ ಬ್ಯಾಂಕ್ ನ ಡೆಬಿಟ್ ಕಾರ್ಡ್ ನಂಬರ್ ನ ಎಲ್ಲಾ ಮಾಹಿತಿ ನೀಡಿದ್ದು, ನಂತರ ಈಕೆಯ ಮೊಬೈಲ್ ನಂಬರ್ ಗೆ 6 ಬಾರಿ ಬಂದ ಓಟಿಪಿ ನಂಬರ್ಗಳನ್ನು ಪಡೆದು ಖಾತೆಯಿಂದ ಹಂತ ಹಂತವಾಗಿ ಒಟ್ಟು 49 ಸಾವಿರದ 391 ರೂ. ಹಣವನ್ನು ದೋಚಿದ್ದಾನೆ.
ಖಾತೆಯಿಂದ ಹಣ ಕಡಿತವಾದ ಬಗ್ಗೆ ಮೊಬೈಲ್ಗೆ ಮೆಸೇಜ್ ಬಂದಾಗ ಅಪರಿಚಿತನಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಲಿಲ್ಲ.
ನಂತರ ಅನುಮಾನ ಬಂದು ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಅನ್ಲೈನ್ ಮೂಲಕ ಹಣ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.