ದಾವಣಗೆರೆ, ನ.24- ಸೋದರ ಮಾವನೊಂದಿಗಿನ ಅಪ್ರಾಪ್ತೆಯ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡ ಯಶಸ್ವಿಯಾಗಿದೆ.
ಹರಿಹರ ನಗರದ ವಾರ್ಡೊಂದರ ವಾಸಿ ಅಪ್ರಾಪ್ತೆಯ ವಿವಾಹವನ್ನು ಆಕೆಯ ತಾಯಿಯ ಸಹೋದರ ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ ವಾಸಿ ಜೊತೆಗೆ ಸದ್ಯದರಲ್ಲೇ ಮದುವೆಗೆ ಸಿದ್ಧತೆ ನಡೆದಿದ್ದ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು.
ದೂರಿನ ಹಿನ್ನೆಲೆಯಲ್ಲಿ ತಂಡದ ಸಂಯೋಜಕ ಟಿ.ಎಂ. ಕೊಟ್ರೇಶ್ ಅವರು ಹರಿಹರದಲ್ಲಿ ಅಪ್ರಾಪ್ತೆಯ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆ ಸಂಗ್ರಹಿಸಿ ಪರಿಶೀಲಿಸಿದಾಗ ಬಾಲಕಿಗೆ 16 ವರ್ಷ 6 ತಿಂಗಳಷ್ಟೇ ಆಗಿರುವುದು ಸ್ಪಷ್ಟವಾಗಿದೆ.
ಕಂದಾಯ ನಿರೀಕ್ಷಕ ಎಚ್.ಎನ್. ಆನಂದ್, ಗ್ರಾಮ ಲೆಕ್ಕಾಧಿಕಾರಿ ಎಚ್.ಜಿ. ಹೇಮಂತ ಕುಮಾರ, ನಗರ ಠಾಣೆ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜ ಹಾಗೂ ಮಕ್ಕಳ ಸಹಾಯವಾಣಿ ಕ್ಷೇತ್ರ ಕಾರ್ಯಕರ್ತರಾದ ಬಿ. ಸ್ವಾಮಿ, ಕೆ. ನಾಗರಾಜ ಜೊತೆಗೆ ಬಾಲಕಿಯ ಮನೆಗೆ ತೆರಳಿ ಪಾಲಕರಿಗೆ ವಿಚಾರಿಸಲಾಗಿದೆ.
ಅಪ್ರಾಪ್ತೆಯ ಅಜ್ಜನ ಅನಾರೋಗ್ಯದ ಕಾರಣ ನೀಡಿ ಮದುವೆ ಮಾಡುತ್ತಿರುವುದಾಗಿ ಬಾಲಕಿಯ ಪಾಲಕರು ಹೇಳಿದ್ದಾರೆ. ಬಾಲ್ಯ ವಿವಾಹ ಮಾಡಿದರೆ 1 ಲಕ್ಷ ರೂ. ದಂಡ, 1 ವರ್ಷಕ್ಕಿಂತ ಕಡಿಮೆ ಇಲ್ಲದಂತೆ 2 ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಾಗಲಿದೆ ಎಂಬ ಬಗ್ಗೆ ಪಾಲಕರಿಗೆ ಎಚ್ಚರಿಸಿ, ಕಾನೂನು ತಿಳುವಳಿಕೆ ಮೂಡಿಸಲಾಯಿತು. ಅಧಿಕಾರಿಗಳ ಸಮ್ಮುಖದಲ್ಲಿ ಬಾಲಕಿಯ ತಂದೆ, ತಾಯಿಗಳಿಂದ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪಡೆಯಲಾಗಿದೆ.