ದಾವಣಗೆರೆ, ನ.17- ಚಾಕೋಲೇಟ್ ಖರೀದಿಸಲು ಅಂಗಡಿಗೆ ಬಂದಿದ್ದ ಬಾಲಕನೋರ್ವನ ಸಮಯ ಪ್ರಜೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಅಂಗಡಿ ಮಾಲಕಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿನ ಆವರಗೆರೆ ಸಮೀಪದ ಉತ್ತಮ್‍ಚಂದ್ ಬಡಾವಣೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಎಎಸ್‍ಐ ವೆಂಕಟೇಶ ರೆಡ್ಡಿ ಮತ್ತು ಲಕ್ಷ್ಮಿ ದಂಪತಿ ಮಗ 12 ವರ್ಷದ ಜಿ.ವಿ. ಸುಶಾಂತ ರೆಡ್ಡಿ, ತನ್ನ ಅಕ್ಕ 19 ವರ್ಷದ ಜಿ.ವಿ. ಪ್ರಣೀತಾ ರೆಡ್ಡಿ ಜೊತೆ ಚಾಕೋಲೇಟ್ ತರಲೆಂದು ಮನೆಯ ಸಮೀಪದ ಅಂಗಡಿಯೊಂದಕ್ಕೆ ಹೋಗಿದ್ದು, ಅಲ್ಲಿ ಅಂಗಡಿಯವರು ಕಾಣಲಿಲ್ಲ. ಮಧ್ಯಾಹ್ನವಾಗಿದ್ದರಿಂದ ಊಟಕ್ಕೆ ಒಳಗೆ ಹೋಗಿರ ಬಹುದೆಂದು ಸುಶಾಂತ, ಪ್ರಣೀತಾ ಅಂಗಡಿ ಯವರ ಬರುವಿಕೆಯನ್ನೇ ಎದುರು ನೋಡುತ್ತಿದ್ದರು. ಕೆಲ ನಿಮಿಷಗಳ ಕಾಲ ಕಾದರೂ, ಕೂಗಿದರೂ ಯಾರೂ ಬಾರದ್ದರಿಂದ ಬಾಲಕ ಸುಶಾಂತ ಮನೆಯ ಕಿಟಕಿಯಿಂದ ಇಣುಕಿ ನೋಡಿದ್ದು, ಆಗ ಅಂಗಡಿ ಮಾಲಕಿ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದುದನ್ನು ಕಂಡು ತಕ್ಷಣವೇ ಬಾಲಕ ಜೋರಾಗಿ ಕೂಗಿದ್ದಾನೆ. ಮನೆಯ ಒಳಗೆ ತನ್ನ ಅಕ್ಕನ ಜೊತೆಗೆ ಹೋಗಿ ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾನೆ. ಅಷ್ಟರಲ್ಲಿ ಅಂಗಡಿ ಮಾಲಕಿಯ 14 ವರ್ಷದ ಮಗನೂ ಬಂದಿದ್ದಾನೆ. ಸ್ಥಳೀಯರೂ ತಕ್ಷಣವೇ ಸ್ಥಳಕ್ಕೆ ಧಾವಿಸಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸುಶಾಂತ್ ಅಲ್ಲಿದ್ದವರ ಮೊಬೈಲ್‍ನಿಂದ ಕರೆ ಮಾಡಿದಾಗ ಅಂಬ್ಯುಲೆನ್ಸ್ ಬಂದು ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಬಾಪೂಜಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಅಸ್ವಸ್ಥ ಮಹಿಳೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.