ದಾವಣಗೆರೆ, ನ.5- ಚಿನ್ನಾಭರಣ ವರ್ತಕರೋರ್ವರ ಕಾರಿನ ಗಾಜು ಒಡೆದು 2.50 ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬ್ಯಾಡಗಿ ಪಟ್ಟಣದ ಮಲ್ಲಿಕಾರ್ಜುನ್ ಚಿನ್ನ, ಹಣ ಕಳೆದುಕೊಂಡವರು. ಚಿನ್ನಾಭರಣ ವರ್ತಕ ರಾದ ಮಲ್ಲಿಕಾರ್ಜುನ್ ನಗರದ ಚೌಕಿಪೇಟೆಯ ಮಳಿಗೆಯೊಂದರಲ್ಲಿ ಚಿನ್ನಾಭರಣವನ್ನು ಖರೀದಿಸಿ ವಾಪಸ್ ತೆರಳುವಾಗ ಗುಂಡಿ ಮಹಾದೇವಪ್ಪನವರ ವೃತ್ತದ ಬಳಿ ಕಾರು ನಿಲ್ಲಿಸಿ ತಿಂಡಿ ತಿನ್ನಲು ಹೋಗಿದ್ದಾರೆ. ಬರುವಷ್ಟರಲ್ಲಿ ಕಾರಿನ ಹಿಂಬದಿಯ ಗಾಜು ಒಡೆದು ನಗದು ಹಾಗೂ ಚಿನ್ನವನ್ನು ಕಳ್ಳರು ದೋಚಿದ್ದಾರೆ.
ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ನಗರದ ತೊಗಟವೀರ ಕಲ್ಯಾಣ ಮಂಟಪದ ಬಳಿ ಇದೇ ಮಾದರಿಯಲ್ಲಿ ಕಾರಿನ ಗಾಜನ್ನು ಒಡೆದು 6 ಲಕ್ಷ ರೂ. ದೋಚಿದ್ದನ್ನು ಇಲ್ಲಿ ಸ್ಮರಿಸಬಹುದು.