ಲಕ್ಷ ಮೌಲ್ಯದ ಸಾಗುವಾನಿ, ಮಾವಿನ ಮರದ ತುಂಡು ವಶ
ದಾವಣಗೆರೆ, ಜು.28- ಐವರು ಸಾಗುವಾನಿ ಮರಗಳ್ಳರನ್ನು ಬಂಧಿಸಿರುವ ಸ್ಥಳೀಯ ಗ್ರಾಮಾಂತರ ಪೊಲೀಸರು, ಸುಮಾರು 1 ಲಕ್ಷ ಮೌಲ್ಯದ ಸಾಗುವಾನಿ ಮರದ ತುಂಡುಗಳು ಮತ್ತು ರಿಪೀಸ್ ಹಾಗೂ ಮಾವಿನ ಮರದ ರಿಪಿಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗರಕಟ್ಟೆ ಗ್ರಾಮದವರೆನ್ನಲಾದ ಮಂಜಾನಾಯ್ಕ್, ನಾಗೇಶನಾಯ್ಕ್, ಮಂಜಾನಾಯ್ಕ್, ಸುರೇಶನಾಯ್ಕ್, ಲೋಕೇಶನಾಯ್ಕ್ ಬಂಧಿತರು. ಇದೇ ದಿನಾಂಕ 4ರ ರಾತ್ರಿ ಎಲೆಬೇತೂರು ಗ್ರಾಮದ ಜಮೀನಿನಲ್ಲಿದ್ದ 6 ಸಾಗುವಾನಿ ಗಿಡಗಳನ್ನು ರಸ್ತೆಯ ಅಗಲೀಕರಣದಲ್ಲಿ ಕಳೆದ 2 ವರ್ಷದ ಹಿಂದೆ ಕಡಿದು ಜಮೀನಿನ ಶೆಡ್ಡಿನ ಮುಂದೆ 6 ತುಂಡುಗಳನ್ನು ಹಾಕಿದ್ದನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವು ದಾಗಿ ಕೆ. ಬಾಲರಾಜು ಎಂಬಾತ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆ ಕಾರ್ಯಕ್ಕಾಗಿ ಜಿಲ್ಲಾ ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ನಿರ್ದೇಶನದಂತೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ ಪಿ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನದಲ್ಲಿ ತಂಡಗಳನ್ನು ರಚಿಸಿ ಇದೇ ದಿನಾಂಕ 25ರಂದು ನಾಗರಕಟ್ಟೆ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಹೆಚ್ಚಿನ ತನಿಖೆ ಮಾಡಲಾಗಿ 3 ತಿಂಗಳ ಹಿಂದೆ ಚಾನಲ್ ಏರಿಯಲ್ಲಿ ಇದ್ದ ಸಾಗುವಾನಿ ಹಾಗೂ ಮಾವಿನ ತುಂಡುಗ ಳನ್ನು ಕಳ್ಳತನ ಮಾಡಿಕೊಂಡು ನಾಗರಕಟ್ಟೆ ಗ್ರಾಮದ ಮಂಜಾನಾಯ್ಕ್ಗೆ ಮಾರಾಟ ಮಾಡಿದ್ದು, ಈತನು ಮನೆ ಕಟ್ಟುವ ಸಲುವಾಗಿ ರಿಪೀಸ್ ಗಳನ್ನು ಮಾಡಿಕೊಂಡು ಪಂಚಾಯತಿ ಮಳಿಗೆಯಲ್ಲಿ ಶೇಖರಣೆ ಮಾಡಿದ್ದನ್ನು ಅರಣ್ಯ ಇಲಾಖೆ ಸಮಕ್ಷಮ ಪರಿಶೀಲಿಸಿ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ 6 ಸಾಗುವಾನಿ ತುಂಡುಗಳು ಗೌರಮ್ಮ ಎಂಬುವರ ಕಬ್ಬಿನ ಗದ್ದೆಯಲ್ಲಿ ಮಾರಾಟ ಮಾಡುವ ಸಲುವಾಗಿ ಬಚ್ಚಿಟ್ಟದ್ದನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ವೃತ್ತ ನಿರೀಕ್ಷಕ ಬಿ. ಮಂಜುನಾಥ, ಪಿಎಸ್ ಐಗಳಾದ ಸಂಜೀವ್ಕುಮಾರ್, ಎಂ. ಪಾಷಾ, ಅಧಿಕಾರಿಗಳಾದ ಪ್ರವೀಣ್, ಬಸವರಾಜ ಬಿರಾದರ್, ಜೋವಿತ್ರಾಜ್, ಸಿಬ್ಬಂದಿಗಳಾದ ರಾಜು ಲಮಾಣಿ, ನಾಗರಾಜಯ್ಯ, ಅರುಣಕುಮಾರ ಕುರುಬರ ತಂಡವು ಪ್ರಕರಣ ಪತ್ತೆ ಹಚ್ಚಿದೆ.