ಕೂಡ್ಲಿಗಿ, ಅ.30 – ಈರುಳ್ಳಿ ಮತ್ತು ಹತ್ತಿ ಬೆಳೆಗೆ ಬೆಂಬಲ ಬೆಲೆ ಸಿಗದೇ ನಷ್ಟ ಅನುಭವಿಸಿದ್ದರಿಂದ ಬ್ಯಾಂಕಿನಲ್ಲಿ ಮಾಡಿದ ಬೆಳೆ ಸಾಲ ಹಾಗೂ ಕೈಗಡ ಸಾಲ ತೀರಿಸಲಾಗದೆ ಮನನೊಂದ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಶೇಖರಪ್ಪ (38) ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ ತಂದೆಯ ಹೆಸರಿನಲ್ಲಿರುವ 4 ಎಕರೆ ಹೊಲದಲ್ಲಿ ಬೆಳೆದ ಹತ್ತಿ, ಈರುಳ್ಳಿ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ಶೇಖರಪ್ಪ ನೊಂದಿದ್ದರು. ಚಿಕ್ಕಜೋಗಿಹಳ್ಳಿಯ ಎಸ್.ಬಿ.ಐ. ಬ್ಯಾಂಕಿನಲ್ಲಿ ಮಾಡಿದ್ದ 50 ಸಾವಿರ ಬೆಳೆ ಸಾಲ, ಮಗಳ ಮದುವೆಗೆ ಮಾಡಿದ ಕೈಗಡ ಸಾಲ ಮಾಡಿದ್ದರೆನ್ನಲಾಗಿದೆ. ಶೇಖರಪ್ಪ ಇದೇ ದಿನಾಂಕ 24 ರಂದು ಹೊಲದಲ್ಲಿ ಕ್ರಿಮಿನಾಶಕ ಸೇವನೆ ಮಾಡಿದ್ದು, ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತನ ತಂದೆ ಹೊಸದುರ್ಗ ತಿಮ್ಮಪ್ಪ ನೀಡಿದ ದೂರಿನಂತೆ, ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.