ದಾವಣಗೆರೆ, ಜು.24- ಫೈನಾನ್ಸ್ ಕಂಪನಿಯ ಹೆಸರಿನಲ್ಲಿ ಸಂಪರ್ಕಿಸಿದ ಅಪರಿಚಿತನು, ವ್ಯವಹಾರದ ಲೋನ್ ಕೊಡಿಸುವುದಾಗಿ ನಂಬಿಸಿ, ಆನ್‌ಲೈನ್ ಮುಖಾಂತರ ವರ್ಕ್ ಶಾಪ್ ವ್ಯವಹಾರಸ್ಥ ನೋರ್ವನ ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿನೋಬನಗರದ ಎಸ್.ಅಭಿಲಾಷ್ ವಂಚನೆಗೊಳಗಾದ ವರ್ಕ್ ಶಾಪ್ ವ್ಯವಹಾರಸ್ಥ. ಕಳೆದ ನಾಲ್ಕು ದಿನಗಳ ಹಿಂದೆ ದೂರವಾಣಿ ಮುಖೇನ ಸಂಪರ್ಕಿಸಿದ ಅಪರಿಚಿತನು, ತಾನು ಬಜಾಜ್ ಫೈನಾನ್ಸ್ ಲಿಮಿಟೆಡ್ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಪರಿಚಿತನಾಗಿ ವ್ಯವಹಾರದ ಲೋನ್ 5 ಲಕ್ಷ ಮಂಜೂರಾಗಿದ್ದು, ಪ್ರೊಸೆಸಿಂಗ್ ಫೀ 4,500 ಹಣವನ್ನು ಖಾತೆಗೆ ಸಂದಾಯ ಮಾಡಿ, ನಂತರ 5 ಲಕ್ಷ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ನಂಬಿಸಿದ್ದಾನೆ.
ನಂತರ ಜಿಎಸ್‌ಟಿ ಟ್ಯಾಕ್ಸ್ ಫೀ ಎಂದು ಹೇಳಿ 16 ಸಾವಿರ ಹೀಗೆ ನಾನಾ ಫೀಗಳೆಂದು ಹೇಳಿ ಒಟ್ಟು 29 ಸಾವಿರ ರೂ. ಆನ್‌ಲೈನ್ ಮುಖಾಂತರ ಖಾತೆಗೆ ಹಾಕಿಸಿಕೊಂಡಿದ್ದಲ್ಲದೇ, ಮರುದಿನ ಪುನಃ ಹಣವನ್ನು ಖಾತೆಗೆ ಜಮಾ ಮಾಡುವಂತೆ ತಿಳಿಸಿದ ಕಾರಣ ಒಟ್ಟು 1,05,500 ಹಣವನ್ನು ಹಂತ ಹಂತವಾಗಿ ಜಮಾ ಮಾಡಲಾಯಿತು. ನನಗೆ ವ್ಯವಹಾರಕ್ಕಾಗಿ ಹಣದ ಅವಶ್ಯಕತೆ ಇದ್ದಾಗ ಅದೇ ಸಮಯದಲ್ಲಿ ಲೋನ್ ಕೊಡಿಸುವ ಆಸೆ ತೋರಿಸಿದ್ದನ್ನು ನಂಬಿ ಮೋಸ ಹೋಗಿರು ವುದಾಗಿ ವಂಚನೆಗೊಳಗಾದ ಅಭಿಲಾಷ್ ದೂರಿನಲ್ಲಿ ತಿಳಿಸಿದ್ದಾರೆ.