ದಾವಣಗೆರೆ, ಜು.18- ಪ್ರತಿ ದಿನವೂ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ತನ್ನ ಪತಿಯನ್ನೇ ಕೊಲೆಗೈದಿದ್ದ ಪತ್ನಿ ಮತ್ತು ಇಬ್ಬರು ಮಕ್ಕಳೂ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಹರ ತಾಲ್ಲೂಕು ನಿಟ್ಟೂರು ಗ್ರಾಮದ ಬಸಪ್ಪ ಅಲಿಯಾಸ್ ಬಸವರಾಜಪ್ಪ (38) ನನ್ನು ಕೊಲೆಗೈದಿದ್ದ ಆತನ ಪತ್ನಿ ರೂಪ, ಮಕ್ಕಳಾದ ಅರುಣ ಕುಮಾರ, ಕಿರಣ್ ಮತ್ತು ರೂಪಾಳ ಸಹೋದರ ಕೋಟೆಮಲ್ಲೂರು ಗ್ರಾಮದ ಸಂತೋಷ್ ಬಂಧಿತ ಆರೋಪಿಗಳು.
ಘಟನೆ ವಿವರ: ಪ್ರತಿ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮತ್ತು ಬಾಯಿಗೆ ಬಂದಂತೆ ನಿಂದಿಸುತ್ತಿದ್ದ ಎನ್ನಲಾಗಿದೆ. ಇದೇ ದಿನಾಂಕ 14ರಂದು ಮದ್ಯ ಸೇವಿಸಿ ಬಂದು ಬಸಪ್ಪ ಮನೆಯಲ್ಲಿ ಮಕ್ಕಳ ಎದುರಿಗೇ ಪತ್ನಿಯೊಂದಿಗೆ ಗಲಾಟೆ ಮಾಡಿದ್ದು, ಇದನ್ನು ಕಣ್ಣಾರೆ ಕಂಡ ಮಕ್ಕಳಿಬ್ಬರು ತಾಯಿ ಉತ್ತಮವಾಗಿ ಸಂಸಾರ ತೂಗಿಸಿಕೊಂಡು ಹೋದರೂ ಸಹ ಗಲಾಟೆ ಮಾಡುವುದಕ್ಕೆ ಅಸಮಾಧಾನಗೊಂಡು ತಂದೆಗೆ ಕಪಾಳಕ್ಕೆ ಹೊಡೆದ ಸಂದರ್ಭದಲ್ಲಿ ಆತ ಮೃತಪಟ್ಟಿದ್ದ. ನಂತರ ಈ ಕೊಲೆಯನ್ನು ಮುಚ್ಚಿಡುವ ಸಲುವಾಗಿ ಈ ನಾಲ್ವರು ಸೇರಿಕೊಂಡು ಬಸಪ್ಪನನ್ನು ನೇಣು ಹಾಕಿದ್ದಾರೆ. ಆದರೆ, ಮೃತನ ಪತ್ನಿ ರೂಪ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ತನ್ನ ಗಂಡ ಮೃತಪಟ್ಟಿದ್ದು, ಈ ಸಾವಿನ ಬಗ್ಗೆ ಅನುಮಾನವಿರುವುದಾಗಿ ದೂರು ನೀಡಿದ್ದರು. ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ದಿನಾಂಕ 17ರಂದು ಮೃತನ ಮರಣೋತ್ತರ ವರದಿಯಲ್ಲಿ ಕತ್ತು ಹಿಸುಕಿದ್ದರಿಂದ ಮೃತಪಟ್ಟಿರುವುದಾಗಿ ತಿಳಿದು ಬಂತು. ನಂತರ ಪೊಲೀಸ್ ಅಧೀಕ್ಷಕ ಹನುಮಂತರಾಯ ಈ ಕುರಿತು ವಿಶೇಷ ತನಿಖೆಗೆ ಆದೇಶಿಸಿದ್ದರ ಮೇರೆಗೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಶಿವಪ್ರಸಾದ್ ಮತ್ತು ಮಲೇಬೆನ್ನೂರು ಪಿಎಸ್ಐ ವೀರಬಸಪ್ಪ ಕುಸಲಾಪುರ ಹಾಗೂ ಸಿಬ್ಬಂದಿಗಳಾದ ಕೆ. ಶಿವಕುಮಾರ್, ರಾಜಶೇಖರ್, ಟಿ. ಬಸವರಾಜ್, ಕಡೆಮನಿ ನಾಗಪ್ಪ ಒಳಗೊಂಡಂತೆ ರಚಿಸಲಾಗಿದ್ದ ವಿಶೇಷ ತಂಡವು ತನಿಖೆ ನಡೆಸಿದಾಗ ಮೃತನ ಪತ್ನಿ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.