ದಾವಣಗೆರೆ, ಜು,13- ಹಾಡಹಗಲೇ ಮೋಟಾರ್ ಬೈಕ್ ನಲ್ಲಿ ಬಂದು ಪಾದಚಾರಿ ಇಬ್ಬರು ಶಿಕ್ಷಕಿಯರು ಮತ್ತು ಕಿರಾಣಿ ಅಂಗಡಿಯ ಓರ್ವ ಮಹಿಳೆಯ ಕೊರಳಲ್ಲಿನ ಸರಗಳನ್ನು ಅಪಹರಿಸಿ ಪರಾರಿಯಾಗಿರುವ ಪ್ರತ್ಯೇಕ ಮೂರು ಪ್ರಕರಣಗಳು ನಗರದಲ್ಲಿ ಇಂದು ಬೆಳಿಗ್ಗೆ 10.30ರ ವೇಳೆಯಲ್ಲಿ ಅಲ್ಪ ಸಮಯದಲ್ಲೇ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಸಿದೆ.
ಮೌಲ್ಯಮಾಪನಕ್ಕೆ ಬರುತ್ತಿದ್ದ ಶಿಕ್ಷಕಿ: ಚನ್ನಗಿರಿ ತಾಲ್ಲೂಕು ಮಾವಿನ ಹೊಳೆ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ಗಾಯತ್ರಿ ಅವರು ಹೊನ್ನಾಳಿಯ ತನ್ನ ತಾಯಿ ಮನೆಯಿಂದ ಪ್ರತಿ ದಿನದಂತೆ ನಗರಕ್ಕಾಗಮಿಸಿ ತಮಗೆ ನೇಮಿಸಿರುವ ಸಿದ್ದಗಂಗಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯ ಮಾಪನ ಕರ್ತವ್ಯಕ್ಕಾಗಿ ಸಹೋದ್ಯೋಗಿ ದೀಪಾ ಜೊತೆಗೆ ಹೋಗುತ್ತಿದ್ದಾಗ ಸಿದ್ದಗಂಗಾ ಶಾಲೆ ಹಿಂಭಾಗದ ರಸ್ತೆಯಲ್ಲಿ ಅಪರಿಚಿತರು ಬೈಕ್ ನಲ್ಲಿ ಎದುರುಗಡೆ ಬಂದು ಅಡ್ಡಗಟ್ಟಿದರು. ಆಗ ಪಕ್ಕಕ್ಕೆ ಸರಿಯಲು ಮುಂದಾದ ವೇಳೆ ಬೈಕ್ ಹಿಂಬದಿ ಸವಾರ ಏಕಾಏಕಿ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ. ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಶಿಕ್ಷಕಿ ನೆಲಕ್ಕೆ ಬಿದ್ದಿದ್ದು, ಆದರೂ ಬಿಡದೇ ಸುಮಾರು 5 ಗ್ರಾಂ ತೂಕದ ಒಂದು ಎಳೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಅಂಗಡಿ ಬಾಗಿಲು ತೆರೆಯಲು ಹೊರಟ ಗೃಹಿಣಿ: ಕೆಟಿಜೆ ನಗರದ ಎಸ್. ಗೀತಾ ಎಂಬ ಗೃಹಿಣಿಯು ನಿಟ್ಟುವಳ್ಳಿಯಲ್ಲಿರುವ ತಮ್ಮ ಕಿರಾಣಿ ಅಂಗಡಿ ಬಾಗಿಲು ತೆರೆಯಲು ಸಿದ್ದಗಂಗಾ ಶಾಲೆ ಹಿಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಎದುರುಗಡೆ ಬಂದ ಇಬ್ಬರ ಪೈಕಿ ಹಿಂಬದಿ ಸವಾರ ಏಕಾಏಕಿ ಕೊರಳಿಗೆ ಕೈ ಹಾಕಿ ಸರದ ಪೈಕಿ 15 ಗ್ರಾಂ ತೂಕದ ಒಂದು ಎಳೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಎರಡೂ ಪ್ರಕರಣಗಳು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಶಾಲೆಗೆ ಹೊರಟ್ಟಿದ್ದ ಶಿಕ್ಷಕಿ: ಕೆ.ಬಿ. ಬಡಾವಣೆಯ ಯಶೋಧಮ್ಮ ಅವರು ಎಸ್.ಎಸ್. ಲೇಔಟ್ `ಎ’ ಬ್ಲಾಕ್ ನಲ್ಲಿರುವ ಅಂಗವಿಕಲರ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ಶಾಲೆಯ ಶಿಕ್ಷಕಿಯಾಗಿದ್ದು, ಎಸ್.ಎಸ್. ಲೇಔಟ್ `ಎ’ ಬ್ಲಾಕ್ 4ನೇ ಕ್ರಾಸ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಏಕಾಏಕಿ ಬಂದ ಅಪರಿಚಿತರು ಕೊರಳಿಗೆ ಕೈ ಹಾಕಿ ಒಟ್ಟು 5 ತೊಲದ ಬಂಗಾರದ ಸರವನ್ನು ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ.
ಈ ಪ್ರಕರಣವು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.